ನವದೆಹಲಿ:
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ‘ಐತಿಹಾಸಿಕ ಗೆಲುವು’ ಸಾಧಿಸುವ ಮೂಲಕ ಎರಡನೇ ಬಾರಿ ಅಧ್ಯಕ್ಷ ಪಟ್ಟಕ್ಕೇರುತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭಿನಂದಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಡೊನಾಲ್ಡ್ ಟ್ರಂಪ್ ಜತೆಗಿರುವ ಫೋಟೊವನ್ನು ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಐತಿಹಾಸಿಕ ಗೆಲುವು ಸಾಧಿಸಿದ ನನ್ನ ಸ್ನೇಹಿತನಿಗೆ ಹೃತ್ಪೂರ್ವಕ ಅಭಿನಂದನೆಗಳು. ನಮ್ಮ ಜನರ ಯೋಗಕ್ಷೇಮಕ್ಕಾಗಿ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದಾರೆ.
‘ನಿಮ್ಮ ಹಿಂದಿನ ಅವಧಿಯ ಯಶಸ್ಸಿನಂತೆಯೇ ಭಾರತ-ಅಮೆರಿಕ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಿಮ್ಮ ಸಹಕಾರವನ್ನು ಎದುರು ನೋಡುತ್ತಿದ್ದೇವೆ ಎಂದು ಮೋದಿ ಪೋಸ್ಟ್ ಮಾಡಿದ್ದಾರೆ. 78 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್ ಅವರು ಇಂದು ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲೆಕ್ಟೋರಲ್ ಕಾಲೇಜ್ ಮತಗಳ ಎಣಿಕೆ ನಡೆಯುತ್ತಿದ್ದು, ಒಟ್ಟು 538 ಎಲೆಕ್ಟೋರಲ್ ಮತಗಳ ಪೈಕಿ ಬಹುತಮಕ್ಕೆ 270 ಮತಗಳ ಅಗತ್ಯವಿದೆ.ಟ್ರಂಪ್ ಅವರು ಈಗಾಗಲೇ 270 ಮತಗಳನ್ನು ಪಡೆಯುವ ಮೂಲಕ ಮ್ಯಾಜಿಕ್ ನಂಬರ್ ತಲುಪಿದ್ದಾರೆ. ಇನ್ನು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡ ಸ್ಪರ್ಧೆಯಲ್ಲಿದ್ದು, ಇಲ್ಲಿಯವರೆಗೆ 224 ಮತಗಳನ್ನು ಪಡೆದಿದ್ದಾರೆ.