ಮಹಾರಾಷ್ಟ್ರ:
ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ಪಕ್ಷದ ಶಾಹಿ ಪರಿವಾರಕ್ಕೆ (ಗಾಂಧಿ ಕುಟುಂಬ) ATM ಗಳಾಗಿವೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಕಾಂಗ್ರೆಸ್ ATM ಆಗಲು ನಾವು ಬಿಡಲ್ಲಎಂದು ಪ್ರಧಾನಿ ನರೇಂದ್ರ ಮೋದಿ
ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಇದೇ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕೋಲಾದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಅವರು ಎಂದಾದರೂ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪಂಚತೀರ್ಥಕ್ಕೆ ಭೇಟಿ ನೀಡಿದ್ದರೆ ಅದನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್‌ನ ಶಾಹಿ ಪರಿವಾರಕ್ಕೆ ಸವಾಲು ಹಾಕುತ್ತೇನೆ ಎಂದರು.
ಅಂಬೇಡ್ಕರ್ ಅವರ ಜನ್ಮಸ್ಥಳ ಮೊವ್, ಯುಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಲಂಡನ್ ನಲ್ಲಿ ತಂಗಿದ್ದ ಸ್ಥಳ, ಬೌದ್ಧ ಧರ್ಮವನ್ನು ಸ್ವೀಕರಿಸಿದ ನಾಗ್ಪುರದ ದೀಕ್ಷಾ ಭೂಮಿ, ದೆಹಲಿಯಲ್ಲಿ ಅವರ ‘ಮಹಾಪರಿನಿರ್ವಾಣ ಸ್ಥಳ’ ಮತ್ತು ಮುಂಬೈನ ‘ಚೈತ್ಯ ಭೂಮಿ’ಯ ಸಂಕೇತವಾಗಿ ಮೋದಿ ಅವರು ಪಂಚತೀರ್ಥ ಎಂಬ ಪದವನ್ನು ಬಳಸುವ ಮೂಲಕ ದಲಿತರ ಮತದ ಬುಟ್ಟಿಗೆ ಕೈ ಹಾಕಲು ಪ್ರಯತ್ನಿಸಿದರು.
ಹರಿಯಾಣದ ಜನರು ‘ಏಕ್ ಹೈ ತೋ ಸೇಫ್ ಹೈ’ (ನಾವು ಒಗ್ಗಟ್ಟಿನಿಂದ ಇದ್ದರೆ ನಾವು ಸುರಕ್ಷಿತರು) ಎಂಬ ಮಂತ್ರವನ್ನು ಅನುಸರಿಸುವ ಮೂಲಕ ಕಾಂಗ್ರೆಸ್‌ನ ಪಿತೂರಿಯನ್ನು ವಿಫಲಗೊಳಿಸಿದ್ದಾರೆ.ದೇಶವನ್ನು ದುರ್ಬಲಗೊಳಿಸಿದರೆ ಮಾತ್ರ ಬಲಗೊಳ್ಳುತ್ತದೆ ಎಂಬುದು ಕಾಂಗ್ರೆಸ್‌ಗೆ ಗೊತ್ತು. ಹೀಗಾಗಿ ಒಂದು ಜಾತಿಯನ್ನು ಇನ್ನೊಂದು ಜಾತಿಯ ವಿರುದ್ಧ ಎತ್ತಿಕಟ್ಟುವುದು ಆ ಪಕ್ಷದ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ ಎಂದರೆ ಭ್ರಷ್ಟಾಚಾರ ಮತ್ತು ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳ ಗುಂಪು ಆಗಿದೆ.ನಾನು ಪ್ರಧಾನಿಯಾದ ಮೊದಲ ಎರಡು ಅವಧಿಯಲ್ಲಿ ಬಡವರಿಗೆ ನಾಲ್ಕು ಕೋಟಿ ಪಕ್ಕಾ ಮನೆಗಳನ್ನು ನೀಡಿದ್ದೇನೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟಕ್ಕೆ ಮತ ಯಾಚಿಸಲು ಬಂದಿರುವುದಾಗಿ ಮೋದಿ ಹೇಳಿದರು.