ಮೋದಿ ಫ್ರಾನ್ಸ್‌ ಪ್ರವಾಸ ಆರಂಭ…!

ನವದೆಹಲಿ:

     ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಫ್ರಾನ್ಸ್‌ಗೆ ತೆರಳಿದ್ದಾರೆ. ಇಂದು ಮತ್ತು ನಾಳೆ ಅವರು ಫ್ರಾನ್ಸ್ ನಲ್ಲಿಯೇ ಇದ್ದು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

    ನಾಳೆ ಮೋದಿಯವರು ಫ್ರಾನ್ಸ್ ನ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ 269 ಸದಸ್ಯರನ್ನೊಳಗೊಂಡ ಭಾರತೀಯ ಸೇನೆಯ ಮೂರೂ ಸೇವೆಗಳ ತುಕಡಿ ಭಾಗವಹಿಸಲಿವೆ.

    ಈ ಸಂದರ್ಭದಲ್ಲಿ ಫ್ರೆಂಚ್ ಜೆಟ್‌ಗಳೊಂದಿಗೆ ಭಾರತೀಯ ವಾಯುಪಡೆಯ ಮೂರು ರಫೇಲ್ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ. ಭಾರತ ಮತ್ತು ಫ್ರಾನ್ಸ್ ಮಧ್ಯೆ ರಕ್ಷಣೆ, ಬಾಹ್ಯಾಕಾಶ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಧಾನಿ ಮೋದಿ ಅವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

    ತಮ್ಮ ಪ್ರವಾಸ ಕುರಿತು ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, “ಪ್ಯಾರಿಸ್‌ಗೆ ಹೊರಡುತ್ತಿದ್ದೇನೆ, ಅಲ್ಲಿ ನಾನು ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇತರ ಫ್ರೆಂಚ್ ಗಣ್ಯರೊಂದಿಗೆ ಹಲವು ಫಲಪ್ರದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ. ಭಾರತೀಯ ಸಮುದಾಯವನ್ನು ಭೇಟಿ ಮಾಡುವುದು, ಉನ್ನತ ಸಿಇಒಗಳೊಂದಿಗೆ ಸಂವಾದವನ್ನು ನನ್ನ ಪ್ರವಾಸದಲ್ಲಿ ಒಳಗೊಂಡಿವೆ.” ಎಂದು ಬರೆದುಕೊಂಡಿದ್ದಾರೆ. 

    ನಂತರ ಪ್ರಧಾನಿ ಮೋದಿ ತಮ್ಮ ಯುಎಇ ಭೇಟಿಯನ್ನು ಪ್ರಸ್ತಾಪಿಸಿದ್ದಾರೆ. “ಜುಲೈ 15ರಂದು ನಾನು ಅಧಿಕೃತ ಭೇಟಿಗಾಗಿ ಯುಎಇಗೆ ಹೋಗುತ್ತೇನೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಲಿದ್ದೇನೆ. ನಮ್ಮ ಭೇಟಿ, ಮಾತುಕತೆಯಿಂದ ಭಾರತಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

    ಭಾರತೀಯ ಕಾಲಮಾನ ಪ್ರಕಾರ, ಪ್ರಧಾನಿಯವರು ಇಂದು ಸಂಜೆ ಸುಮಾರು 4 ಗಂಟೆಗೆ ಪ್ಯಾರಿಸ್‌ಗೆ ತಲುಪಲಿದ್ದಾರೆ.  ಓರ್ಲಿ ವಿಮಾನ ನಿಲ್ದಾಣದಲ್ಲಿ ಅವರಿಗೆ ವಿದ್ಯುಕ್ತ ಸ್ವಾಗತ ದೊರಕಲಿದೆ. 

    ಇಂದು ರಾತ್ರಿ 7.30 ರ ಸುಮಾರಿಗೆ ಪ್ರಧಾನಿ ಮೋದಿ ಸೆನೆಟ್‌ಗೆ ಆಗಮಿಸಿ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರನ್ನು ಭೇಟಿಯಾಗಲಿದ್ದಾರೆ. ನಂತರ ರಾತ್ರಿ 8.45 ರ ಸುಮಾರಿಗೆ ಪ್ರಧಾನಿ ಮೋದಿ ಅವರು ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರೊಂದಿಗೆ ಸಭೆ ನಡೆಸಲಿದ್ದಾರೆ.

    ಪ್ರಧಾನಮಂತ್ರಿ ಮೋದಿಯವರು ನಂತರ ರಾತ್ರಿ ಸುಮಾರು 11 ಗಂಟೆಗೆ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದರ ನಂತರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಆಯೋಜಿಸಿದ ಖಾಸಗಿ ಭೋಜನ ಕೂಟದಲ್ಲಿ ಭಾಗವಹಿಸಲು ಎಲಿಸೀ ಅರಮನೆಗೆ ತೆರಳಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap