ಬೆಂಗಳೂರು
ಬೆಂಗಳೂರು ಮಧುರೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇರಿದಂತೆ ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ವನ್ನೊಳಗೊಂಡ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಾಹ್ನ ಚಾಲನೆ ನೀಡಿದರು. ಚೆನ್ನೈ ಸೆಂಟ್ರಲ್ ಹಾಗೂ ನಾಗರ್‌ಕೋಯಿಲ್, ಮೀರತ್ ಹಾಗೂ ಲಖನೌ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಲಾಗಿದೆ.
ಮಧುರೈ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ಈ ವಂದೇ ಭಾರತ್ ರೈಲು ಸೇವೆಯು ತಮಿಳುನಾಡಿನ ಮಧುರೈನ ದೇವಾಲಯ ನಗರವನ್ನು ಕರ್ನಾಟಕದ ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರದೊಂದಿಗೆ ಸಂಪರ್ಕಿಸುತ್ತದೆ.
ರೈಲಿನ ಸಮಯ
ರೈಲು ಸಂಖ್ಯೆ 20671 ಮಧುರೈನಿಂದ ಬೆಳಿಗ್ಗೆ 5:15 ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ. ಪ್ರತಿಯಾಗಿ (ಟ್ರೇನ್ ಸಂಖ್ಯೆ 20672)ಬೆಂಗಳೂರಿನಿಂದ ಮಧ್ಯಾಹ್ನ 1:30 ಕ್ಕೆ ಹೊರಡುವ ವಂದೇ ಭಾರತ್ ರೈಲು ರಾತ್ರಿ 9:45ಕ್ಕೆ ಮಧುರೈಗೆ ತಲುಪಲಿದೆ.ಮಧುರೈ ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದಿಂಡುಗಲ್, ತಿರುಚಿರಾಪಳ್ಳಿ, ಕರೂರ್, ನಾಮಕ್ಕಲ್, ಸೇಲಂ ಮತ್ತು ಕೃಷ್ಣರಾಜಪುರಂನಲ್ಲಿ ನಿಲುಗಡೆ ಹೊಂದಿದೆ.
ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಖಾತೆಯಲ್ಲಿ ಸಂದೇಶ ಪ್ರಕಟಿಸಿದ್ದಾರೆ .ಪ್ರಧಾನಮಂತ್ರಿ ನರೇಂದ್ರ ಮೋದಿ 3 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ದೃಷ್ಟಿಕೋನದಡಿ ಈ ಉಪಕ್ರಮ ಕೈಗೊಳ್ಳಲಾಗಿದ್ದು, ಅತ್ಯಾಧುನಿಕ ರೈಲುಗಳು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ ಎಂದು ಎಕ್ಸ್ ಸಂದೇಶದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.