ಬೆಳಗಾವಿ:
ಕಳೆದ 10 ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಳ್ಳು ಹೇಳಿ ಜನರನ್ನು ಮೋಸ ಮಾಡಿದ್ದಾರೆ, ಈ ಬಾರಿ ಮತ ಹಾಕುವುದಕ್ಕೂ ಮುನ್ನ ಯೋಚಿಸಿ ಎಂದು ಮತದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ.
ಮಂಗಳವಾರ ಗೋಕಾಕದಲ್ಲಿ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು. ಏಕೆಂದರೆ ನಮ್ಮ ಪಕ್ಷ ಬಡವರು, ರೈತರು, ಹಿಂದುಳಿದ ವರ್ಗಗಳು, ಇತರ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರ ಕಲ್ಯಾಣವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
2014 ರಿಂದ ಅಧಿಕಾರದಲ್ಲಿರುವ ಮೋದಿಸ ದೇಶದ ಭವಿಷ್ಯವನ್ನು ರೂಪಿಸಲು ಪ್ರಯತ್ನಿಸಲಿಲ್ಲ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ನೀವು (ಜನರು) ಹಾಕುವ ಮತಗಳು ದೇಶದ ಭವಿಷ್ಯವನ್ನು ನಿರ್ಧರಿಸುತ್ತವೆ. ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆಯೇ? ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯಿದೆ ಮತ್ತು ಕಾರ್ಮಿಕ ಹಕ್ಕು, ಶಿಕ್ಷಣದ ಹಕ್ಕು ಇತ್ಯಾದಿಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಜಾರಿ ತಂದರು. ಮನಮೋಹನ್ ಸಿಂಗ್ ಅವರು ಜಾರಿಗೆ ತರದಿದ್ದರೆ ಬಡವರಿಗೆ ಅನ್ನ ನೀಡಲು ನಮಗೆ (ಕಾಂಗ್ರೆಸ್) ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿರು.
ಮೋದಿಯವರು ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣ ವಾಪಸ್ ತರುವ ಮೂಲಕ ಜನರ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರೂ ಏನೂ ಮಾಡಿಲ್ಲ, ಇತ್ತೀಚೆಗೆ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಬಿಜೆಪಿಗೆ 210 ಸ್ಥಾನ ಸಿಗುವ ಭವಿಷ್ಯ ನುಡಿದಿತ್ತು. ಬಳಿಕ ಸಾಮಾಜಿಕ ಜಾಲತಾಣಗಳ ಅಂಕಿಅಂಶಗಳು ಹೊರಬಂದ ಕೂಡಲೇ ಬಿಜೆಪಿ ಆ ವರದಿಯನ್ನು ತೆಗೆದು ಹಾಕಿತ್ತು ಎಂದು ವ್ಯಂಗ್ಯವಾಜಿದರು.
ಇದೇ ವೇಳೆ ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂಬ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 52,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಹಾಗೂ 82,000 ಕೋಟಿ ರೂಪಾಯಿಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲಾಗಿದೆ ಸ್ಪಷ್ಟಪಡಿಸಿದರು.