ನವದೆಹಲಿ:
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮಟಮೇಲಾ ಸಿರಿಲ್ ರಾಮಫೋಸಾ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಮಂಗಳವಾರ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ವಿಶ್ವ ಆರ್ಥಿಕತೆಯ ಗುಂಪಿಗೆ ಬ್ರಿಕ್ಸ್ ಎಂದು ಕರೆಯಲಾಗುತ್ತದೆ.
ಆಗಸ್ಟ್ 22 ರಿಂದ -24 ರವಗೆ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಬ್ರಿಕ್ಸ್ ಶೃಂಗದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ಪ್ರಧಾನಿ ಇಂದಿನಿಂದ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಇದರೊಂದಿಗೆ ಮೋದಿ ಅವರು, ಆಫ್ರಿಕಾಕ್ಕೆ ಮೂರನೇ ಬಾರಿಗೆ ಭೇಟಿ ನೀಡಿದಂತಾಗಿದೆ.
ಪ್ರಧಾನಿಯವರ ಭೇಟಿಯ ಕುರಿತು ವಿವರಗಳನ್ನು ನೀಡಿದ ವಿನಯ್ ಕ್ವಾತ್ರಾ, 15 ನೇ ಬ್ರಿಕ್ಸ್ ಶೃಂಗಸಭೆ ವೇಳೆ ವಾಣಿಜ್ಯೋದ್ಯಮ ಸಭೆಗಳು, ಬ್ರಿಕ್ಸ್ ವ್ಯಾಪಾರ ಮಂಡಳಿ, ಬ್ರಿಕ್ಸ್ ಮಹಿಳಾ ವ್ಯಾಪಾರ ಒಕ್ಕೂಟ ಸಭೆಗಳಲ್ಲಿ ಭಾರತದ ವ್ಯಾಪಾರ ಒಕ್ಕೂಟದ ನಿಯೋಗವು ಮಹತ್ವದ ಚರ್ಚೆಗಳಲ್ಲಿ ಭಾಗವಹಿಸಲಿದೆ ಎಂದು ಹೇಳಿದ್ದಾರೆ.
ಈ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಾ ಭಾಗವಹಿಸಲಿದ್ದಾರೆ. ಇನ್ನು ರಷ್ಯಾದ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ವಹಿಸಲಿದ್ದಾರೆ. ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗದ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಆಗಸ್ಟ್ 25 ರಂದು ಗ್ರೀಸ್ ಪ್ರಧಾನಿಯ ಆಹ್ವಾನದ ಮೇರೆಗೆ ಅಧಿಕೃತ ಭೇಟಿಗಾಗಿ ಗ್ರೀಸ್‌ಗೆ ಪ್ರಯಾಣಿಸಲಿದ್ದಾರೆ ಎಂದು ಕ್ವಾತ್ರಾ ಮಾಹಿತಿ ನೀಡಿದ್ದಾರೆ.