ಶಿವಮೊಗ್ಗ:
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಅವರ ವೀಡಿಯೋಗಳನ್ನು ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್ ಎಂದು ಬಿಜೆಪಿಗೆ ಗೊತ್ತಿತ್ತು. ಆದರೂ ಅವರ ಪರ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿಯನ್ನು ಗುರಿಯಾಗಿಸಿಕೊಂಡು “ಮಾಸ್ ರೇಪಿಸ್ಟ್” ಪರವಾಗಿ ಮತಯಾಚಿಸಿದ್ದಕ್ಕಾಗಿ ಅವರು ದೇಶದ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದೆ.
33 ವರ್ಷದ ಜೆಡಿಎಸ್ ಸಂಸದ ಭಾಗಿಯಾಗಿದ್ದಾರೆ ಎನ್ನಲಾದ ಹಲವು ಸೆಕ್ಸ್ ವಿಡಿಯೋ ತುಣುಕುಗಳು ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಭಾರಿ ವೈಲರ್ ಆಗಿದ್ದವು.
ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾರೆ. ಇದು ಲೈಂಗಿಕ ಹಗರಣವಲ್ಲ. ಮಾಸ್ ಅತ್ಯಾಚಾರ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಆರೋಪಿಸಿದ್ದಾರೆ.
ನೀವು ಈ ರೇಪಿಸ್ಟ್‌ಗೆ ಮತ ಹಾಕಿದರೆ ಅದು ನನಗೆ ಸಹಾಯ ಮಾಡುತ್ತದೆ ಎಂದು ಅವರು (ಮೋದಿ) ಕರ್ನಾಟಕದ ಜನತೆಗೆ ಹೇಳಿದರು. ಆದರೆ ಪ್ರಧಾನಿ ನಿಮ್ಮ ಮತವನ್ನು ಕೇಳುವಾಗ ಪ್ರಜ್ವಲ್ ಏನು ಮಾಡಿದರು ಎಂಬುದು ಕರ್ನಾಟಕದ ಪ್ರತಿಯೊಬ್ಬ ಮಹಿಳೆಗೆ ತಿಳಿದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.