ಎಮರ್ಜೆನ್ಸಿಗೆ 50 ವರ್ಷ : ಕರಾಳ ದಿನ ಎಂದ ಮೋದಿ

ನವದೆಹಲಿ:

     ಪ್ರಧಾನಿ ಇಂದಿರಾ ಗಾಂಧಿ 1975ರ  ಜೂನ್‌ 25 ರಂದು ಅವರು ದೇಶದಲ್ಲಿ ಹೇರಿದ್ದ ಆಂತರಿಕ ತುರ್ತು ಪರಿಸ್ಥಿತಿಗೆ ಇಂದಿಗೆ 50 ವರ್ಷಗಳಾಗಿವೆ. 1975 ರಿಂದ 1977 ರವರೆಗೆ 21 ತಿಂಗಳ ಕಾಲ ಇದೇ ಪರಿಸ್ಥಿತಿ ಜಾರಿಯಲ್ಲಿತ್ತು. ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಸಂವಿಧಾನದ 352 ನೇ ವಿಧಿಯ ಅಡಿಯಲ್ಲಿ ಅಧಿಕೃತವಾಗಿ ಎಮರ್ಜೆನ್ಸಿಯನ್ನು ಘೋಷಣೆ ಮಾಡಿದ್ದರು. ಇದು ಭಾರತದ ಇತಿಹಾಸದಲ್ಲಿ ವಿವಾದಾತ್ಮಕ ಅವಧಿಯಾಗಿದೆ. ದೇಶಕ್ಕಿರುವ ಆಂತರಿಕ ಮತ್ತು ಬಾಹ್ಯ ಬೆದರಿಕೆಯನ್ನು ಮುಂದೆ ಇಟ್ಟು ಎಮರ್ಜೆನ್ಸಿ ಘೋಷಣೆಯನ್ನು ಮಾಡಲಾಗಿತ್ತು. 

    1970ರ ದಶಕದಲ್ಲಿ ಭಾರತವು ಆರ್ಥಿಕ ಕೊರತೆ, ಹಣದುಬ್ಬರ, ಬರ, ಮತ್ತು ರಾಜಕೀಯ ಅಸ್ಥಿರತೆಯಿಂದ ಬಳಲುತ್ತಿತ್ತು. ಇಂದಿರಾ ಗಾಂಧಿಯವರ ಸರ್ಕಾರದ ವಿರುದ್ಧ ವಿಪಕ್ಷಗಳು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದವು. 1971 ರ ಸಂಸತ್ತಿನ ಚುನಾವಣೆಯಲ್ಲಿ ಸೋಲು ಕಂಡಿದ್ದ ರಾಜ್ ನಾರಾಯಣ್ ಅವರು ಚುನಾವಣೆಗಾಗಿ ಸರ್ಕಾರ ಅಧಿಕಾರಿಗಳು ಹಾಗೂ ಸರ್ಕಾರಿ ಸಾಮ್ಯದ ಸಂಸ್ಥೆಗಳನ್ನು ಬಳಸಿಕೊಂಡಿದೆ ಎಂದು ಆರೋಪಿಸಿ ಕೇಸು ದಾಖಲಿಸಿದ್ದರು. 12 ಜೂನ್ 1975 ರಂದು, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಗಮೋಹನ್‌ಲಾಲ್ ಸಿನ್ಹಾ ವಿಚಾರಣೆ ನಡೆಸಿ ತೀರ್ಪು ನೀಡಿದ್ದರು.

    ಅದರಲ್ಲಿ ಇಂದಿರಾ ಗಾಂಧಿ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಯಿತು. ನ್ಯಾಯಾಲಯವು 1971ರ ಇಂದಿರಾ ಗಾಂಧಿ ಗೆಲುವನ್ನು ಅನರ್ಹ ಎಂದು ಘೋಷಿಸಿತ್ತು. ಇದೇ ವೇಳೆಗೆ ಜಯಪ್ರಕಾಶ್ ನಾರಾಯಣ್ (ಜೆಪಿ) ನೇತೃತ್ವದಲ್ಲಿ ವಿಪಕ್ಷಗಳು ದೊಡ್ಡ ಪ್ರಮಾಣದ ಆಂದೋಲನವನ್ನು ಆರಂಭಿಸಿದವು, ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿದವು. ಇಂದಿರಾ ಅವರ ಸಂಸದ ಸ್ಥಾನ ಕೂಡ ರದ್ದಾಗಿತ್ತು. ಇದನ್ನು ಪ್ರಶ್ನಿಸಿ ಇಂದಿರಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.ಸುಪ್ರೀಂ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್, 24 ಜೂನ್ 1975 ರಂದು, ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿದರು. ಆದರೆ ಅವರಿಗೆ ನೀಡುವ ಎಲ್ಲಾ ಸವಲತ್ತನ್ನು ಕಡಿತಗೊಳಿಸಿ ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ನೀಡಿತ್ತು.

   ಈ ಆದೇಶದ ಬಳಿಕ ತುರ್ತು ಪರಿಸ್ಥಿತಿ ಜಾರಿ ಮಾಡಲಾಯಿತು. ಸಂವಿಧಾನದ 19ನೇ ವಿಧಿಯಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಒಕ್ಕೂಟ ಸ್ಥಾಪನೆ, ಮತ್ತು ಸಂಚಾರ ಸ್ವಾತಂತ್ರ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಯಿತು. ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲಾಗಿತ್ತು. ಈ ಘಟನೆ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೊದಲ ಬಾರಿಗೆ ಸೋಲು ಅನುಭವಿಸಿತ್ತು. 

   ತುರ್ತು ಪರಿಸ್ಥಿತಿ ಹೇರಿಕೆಯಾಗಿ 50 ವರ್ಷಗಳು ಕಳೆದಿವೆ ಎಂದು ಬುಧವಾರ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು ಮತ್ತು ಇದು “ಭಾರತದ ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ” ಎಂದು ಹೇಳಿದರು. ಸಂವಿಧಾನ ಹತ್ಯಾ ದಿವಸ್ ಆಚರಿಸುತ್ತಾ, ಪ್ರಧಾನಿಯವರು, “1975 ರಲ್ಲಿ ನಮ್ಮ ಸಂವಿಧಾನದ ಚೈತನ್ಯವನ್ನು ಉಲ್ಲಂಘಿಸಿದ ರೀತಿಯನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದರು. 

   ಈ ದಿನದಂದು, ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನು ಬದಿಗಿಡಲಾಯಿತು, ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು, ಪತ್ರಿಕಾ ಸ್ವಾತಂತ್ರ್ಯವನ್ನು ಅಳಿಸಿಹಾಕಲಾಯಿತು ಮತ್ತು ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಬಂಧನದಲ್ಲಿಟ್ಟಂತೆ ಇತ್ತು” ಎಂದು ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

Recent Articles

spot_img

Related Stories

Share via
Copy link