ವಾರಣಾಸಿ:
ಪ್ರಧಾನಿ ನರೇಂದ್ರ ಮೋದಿ ಅವರು 2024 ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಇಂದು ಮಂಗಳವಾರ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದು, ಮೂರನೇ ಅವಧಿಗೆ ದಾಖಲೆಯ ಅಂತರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.ವಾರಣಾಸಿ ಕ್ಷೇತ್ರದಲ್ಲಿ ಜೂನ್ 1 ರಂದು ಸಾರ್ವತ್ರಿಕ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ.
ಬೆಳಗ್ಗೆ ಮೋದಿ ಅವರು ಮೊದಲು ಕಾಶಿಯ ಕೊತ್ವಾಲ್ ಕಾಲಭೈರವನ ಆಶೀರ್ವಾದ ಪಡೆದು ನಂತರ 11.40ರ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ದಿನ ಅಭಿಜಿತ್ ಮುಹೂರ್ತ, ಆನಂದ ಯೋಗ, ಸರ್ವಾರ್ಥಸಿದ್ಧಿ ಯೋಗದ ಜೊತೆಗೆ ಭೌಮ ಪುಷ್ಯ ನಕ್ಷತ್ರದ ಕಾಕತಾಳೀಯ ಸಂಗಮವಾಗಿದೆ. ಇದು ಉತ್ತಮ ಮುಹೂರ್ತದ ದಿನ ಎಂದು ಅಯೋಧ್ಯೆ ರಾಮಮಂದಿರ ಶಂಕುಸ್ಥಾಪನೆಗೆ ಶುಭ ಮುಹೂರ್ತ ನೀಡಿದ್ದ ಪಂಡಿತ್ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಧಾನಿ ಮೋದಿ ಗಂಗಾನದಿಯ ದಶಾಶ್ವಮೇಧ ಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಮೋ ಘಾಟ್‌ಗೆ ಕ್ರೂಸ್ ಹಡಗನ್ನು ಹತ್ತುವಾಗ ಅವರು ಗಂಗಾದಲ್ಲಿ ಸ್ನಾನ ಮಾಡಿದರು, ಇಂದು ಗಂಗಾ ಸಪ್ತಮಿಯ ಶುಭ ದಿನವಾಗಿದೆ. ಪ್ರಧಾನಿ ಮೋದಿ ಘಾಟ್‌ನಲ್ಲಿ ಗಂಗಾ ಆರತಿ ಮಾಡಿದರು.
ಪ್ರಧಾನಿಯವರು ತಮ್ಮ ನಾಮಪತ್ರ ಸಲ್ಲಿಕೆಗೂ ಮುನ್ನ ಕಾಲ ಭೈರವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳು ದೇವಾಲಯದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗೂ ಮುನ್ನ ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ಹೊರಗೆ ಭದ್ರತೆಯನ್ನು ಬಲಪಡಿಸಲಾಗಿದೆ.
ನಿನ್ನೆ ಸಂಜೆ ಪ್ರಧಾನಿ ಮೋದಿ ವಾರಣಾಸಿಯಲ್ಲಿ ಐದು ಕಿಲೋಮೀಟರ್‌ಗಳಷ್ಟು ಅದ್ದೂರಿ ರೋಡ್‌ಶೋ ನಡೆಸಿದರು. ಅವರ ಜೊತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಚೌಧರಿ ಭೂಪೇಂದ್ರ ಸಿಂಗ್ ಇದ್ದರು.
ಪ್ರಧಾನಿಯವರನ್ನು ಹುರಿದುಂಬಿಸಲು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಬೆಂಬಲಿಗರು ಮತ್ತು ನಿವಾಸಿಗಳ ಬೃಹತ್ ಜನಸಮೂಹವು ‘ಹರ್ ಹರ್ ಮಹಾದೇವ್’ ಮತ್ತು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ಪ್ರತಿಧ್ವನಿಸಿದವು.