ನಂದೂರ್ಬರ್:
ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಭಾಷಣಗಳು ಪೊಳ್ಳು ಮಾತುಗಳಾಗಿವೆ, ಅಧಿಕಾರಕ್ಕೆ ಬರುವ ಉದ್ದೇಶದಿಂದ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಜನರ ಸೇವೆಗಾಗಿ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ನಂದೂರ್ಬಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋವಾಲ್ ಪಾದ್ವಿ ಅವರ ಪರ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು ಮೋದಿ ಜಿ ಮಾತನಾಡುವುದೆಲ್ಲವೂ ‘ಖೋಖ್ಲಿ ಬಾತೇನ್’ (ಪೊಳ್ಳು ಮಾತು) ಅದು ಯಾವುದೇ ತೂಕವನ್ನು ಹೊಂದಿಲ್ಲ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಆದಿವಾಸಿಗಳ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಒಂದೇ ಒಂದು ಫೋಟೋ ನನಗೆ ತೋರಿಸಿ ಎಂದು ಗಾಂಧಿ ಹೇಳಿದರು. ನಿಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸುವುದು ರಾಜಕೀಯ ನಾಯಕರ ಕರ್ತವ್ಯ, ಬಿಜೆಪಿ ಆದಿವಾಸಿಗಳ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸುವುದಿಲ್ಲ ಎಂದು ಅವರು ಹೇಳಿದರು.
ಆದಿವಾಸಿ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೂತನ ಸಂಸತ್ ಭವನವನ್ನು ಉದ್ಘಾಟಿಸಲು ಅಥವಾ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ.ನಿಜವಾಗಿ ಗೌರವ ನೀಡುವ ವಿಷಯ ಬಂದಾಗ ಮೋದಿಯವರು ಹಿಂದೆ ಸರಿಯುತ್ತಾರೆ ಎಂದು ಆರೋಪಿಸಿದರು.