ಮೋದಿ ಪುಣೆ ಭೇಟಿ: ಕಪ್ಪು ಬಣ್ಣದ ಮಾಸ್ಕ್‌, ಸಾಕ್ಸ್‌, ಬಟ್ಟೆಗೆ ನಿರ್ಬಂಧ

ಪುಣೆ:

      ಪುಣೆಯ ಎಂಐಟಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಮಾಸ್ಕ್‌, ಸಾಕ್ಸ್‌, ಬಟ್ಟೆ ಧರಿಸಿದ್ದವರಿಗೆ ನಿರ್ಬಂಧ ವಿಧಿಸಿದ ಆರೋಪ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಭಾನುವಾರ ಪುಣೆಗೆ ಆಗಮಿಸಿದ್ದರು.

ಕಪ್ಪು ಬಣ್ಣದ ಬಟ್ಟೆ ಧರಿಸಿದ್ದವರಿಗೆ ಕಾರ್ಯಕ್ರಮದಿಂದ ನಿರ್ಬಂಧ ವಿಧಿಸಿದ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪುಣೆ ಪೊಲೀಸ್‌ ಕಮಿಷನರ್‌ ಅಮಿತಾಬ್‌ ಗುಪ್ತಾ ಅವರು ಕಪ್ಪು ಬಾವುಟಕ್ಕೆ ಸಂಬಂಧಿಸಿ ಆದೇಶಗಳನ್ನು ಹೊರಡಿಸಲಾಗಿತ್ತು ಎಂದಿದ್ದಾರೆ.

‘ಆದೇಶದ ಕುರಿತಾಗಿ ಗೊಂದಲ ಏರ್ಪಟ್ಟಿದ್ದು, ಕಪ್ಪು ಬಾವುಟ ಅಥವಾ ಕಪ್ಪು ಬಣ್ಣದ ಬಟ್ಟೆ ತರುವುದನ್ನು ನಿಷೇಧಿಸಲಾಗಿತ್ತು. ಕಪ್ಪು ಬಣ್ಣದ ಬಟ್ಟೆ ಧರಿಸುವುದಕ್ಕೆ ನಿರ್ಬಂಧ ಇರಲಿಲ್ಲ’ ಎಂದು ಗುಪ್ತಾ ವಿವರಿಸಿದ್ದಾರೆ.

ಕಾರ್ಯಕ್ರಮವನ್ನು ವರದಿ ಮಾಡಲು ಹಾಜರಾಗಿದ್ದ ಪತ್ರಕರ್ತ ಮಂಗೇಶ್‌ ಫಲ್ಲೆ ಅವರು ತಾವು ಧರಿಸಿದ್ದ ಕಪ್ಪು ಬಣ್ಣದ ಮಾಸ್ಕ್‌ಅನ್ನು ತೆಗೆಯಲು ಹೇಳಿದರು ಎಂದು ಆರೋಪಿಸಿದ್ದಾರೆ.

ಮೆಟ್ರೊ ರೈಲು, ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ, ಹೆಸರಾಂತ ವ್ಯಂಗ್ಯಚಿತ್ರಕಾರ ಆರ್‌ಕೆ ಲಕ್ಷ್ಮಣ್‌ ಅವರಿಗೆ ಅರ್ಪಿಸಲಾದ ಗ್ಯಾಲರಿ ಮತ್ತು ಸಿಂಬಯಾಸಿಸ್‌ ವಿವಿಯ ಸ್ವರ್ಣ ಮಹೋತ್ಸವ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಉದ್ಘಾಟನೆಯ ಸಲುವಾಗಿ ಪ್ರಧಾನಿ ಮೋದಿ ಅವರು 1 ದಿನದ ಪುಣೆ ಪ್ರವಾಸದಲ್ಲಿದ್ದರು.

ಪುಣೆಗೆ ಬೆಳಿಗ್ಗೆ ಪಿಎಂ ಮೋದಿ ಬರುವುದಕ್ಕೆ ಮೊದಲು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಮಹಾರಾಷ್ಟ್ರದಿಂದ ರಾಷ್ಟ್ರದ ಇತರ ರಾಜ್ಯಗಳಿಗೆ ಕೋವಿಡ್‌ ಹರಡಿತು ಎನ್ನುವ ಮೂಲಕ ರಾಜ್ಯಕ್ಕೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ರಸ್ತೆಗಳಲ್ಲಿ ಕಪ್ಪು ಬಾವುಟ ಮತ್ತು ‘ಗೋ ಬ್ಯಾಕ್‌ ಮೋದಿ’ ತಲೆಬರಹದ ಫಲಕಗಳನ್ನು ಪ್ರದರ್ಶಿಸಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link