ಅಕ್ಟೋಬರ್ 22 ರಿಂದ ಎರಡು ದಿನ ಪ್ರಧಾನಿ ಮೋದಿ ರಷ್ಯಾ ಭೇಟಿ

ನವದೆಹಲಿ: 

   ಕಜಾನ್‌ನಲ್ಲಿ ನಡೆಯಲಿರುವ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ, ಅಕ್ಟೋಬರ್ 22 ರಿಂದ ಎರಡು ದಿನ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಬ್ರಿಕ್ಸ್ ಶೃಂಗಸಭೆ ರಷ್ಯಾದ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

   ಶೃಂಗಸಭೆ ವೇಳೆ ಪ್ರಧಾನಿ ಮೋದಿ ಅವರು, ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಮತ್ತು ಕಜಾನ್‌ನಲ್ಲಿ ಆಹ್ವಾನಿತ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ. ‘ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವ’ ಥೀಮ್ ನ ಶೃಂಗಸಭೆಯು ಪ್ರಮುಖ ಜಾಗತಿಕ ಸಮಸ್ಯೆಗಳನ್ನು ಚರ್ಚಿಸಲು ನಾಯಕರಿಗೆ ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ ಎಂದು MEA ಹೇಳಿದೆ.

    BRIC (ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ) ರಾಷ್ಟ್ರಗಳ ನಾಯಕರು 2006 ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಉನ್ನತ ಮಟ್ಟದ ಸರಣಿ ಸಭೆ ನಂತರ ರಷ್ಯಾದ ಯೆಕಟೆರಿನ್‌ಬರ್ಗ್‌ನಲ್ಲಿ 2009 ರಲ್ಲಿ ಮೊದಲ BRIC ಶೃಂಗಸಭೆ ನಡೆದಿತ್ತು. 

   ಸೆಪ್ಟೆಂಬರ್ 2010 ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ BRIC ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ದಕ್ಷಿಣ ಆಫ್ರಿಕಾವನ್ನು ಪೂರ್ಣ ಸದಸ್ಯರಾಗಿ ಸೇರ್ಪಡೆ ಮಾಡಿಕೊಂಡ ನಂತರ BRIC ಗುಂಪನ್ನು BRICS (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಎಂದು ಮರುನಾಮಕರಣ ಮಾಡಲಾಯಿತು. ವಿಶ್ವದ ಪ್ರಮುಖ ಆರ್ಥಿಕತೆಯ ರಾಷ್ಟ್ರಗಳನ್ನು ಒಟ್ಟುಗೂಡಿಸುವಲ್ಲಿ BRICS ಪ್ರಮುಖ ಗುಂಪಾಗಿದ್ದು, ವಿಶ್ವದ ಶೇ.41 ರಷ್ಟು ಜನಸಂಖ್ಯೆ, ಶೇ. 24 ರಷ್ಟು ಜಿಡಿಪಿ ಮತ್ತು ಶೇ. 16 ರಷ್ಟು ವಿಶ್ವ ವ್ಯಾಪಾರದಲ್ಲಿ ಪಾಲನ್ನು ಹೊಂದಿದೆ.

   ಕಳೆದ ತಿಂಗಳು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ನೀಡಿದರು. ಆ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಉತ್ತಮ ಸ್ನೇಹಿತ ಎಂದು ಕರೆದಿದ್ದರು. ಇದು ಈ ವರ್ಷ ಪ್ರಧಾನಿ ನರೇಂದ್ರ ಮೋದಿ ರಷ್ಯಾಕ್ಕೆ ಭೇಟಿ ನೀಡುತ್ತಿರುವ ಎರಡನೇ ಭೇಟಿಯಾಗಿದೆ.ಈ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ಪ್ರಧಾನಿ ಮೋದಿ ನಡೆಸಲಿದ್ದಾರೆ.

Recent Articles

spot_img

Related Stories

Share via
Copy link
Powered by Social Snap