ಕನ್ಯಾಕುಮಾರಿ:
ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಶನಿವಾರ ಸಂಜೆ ಮುಕ್ತಾಯಗೊಳಿಸಿದರು ಮತ್ತು ತಮಿಳು ಸಂತ ಕವಿ ತಿರುವಳ್ಳುವರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ತಮ್ಮ ಧ್ಯಾನ ಮುಕ್ತಾಯಗೊಳಿಸಿದ ನಂತರ ಪ್ರಧಾನಿ ಮೋದಿ ಬಿಳಿ ಬಟ್ಟೆಯನ್ನು ಧರಿಸಿ, ರಾಕ್ ಸ್ಮಾರಕದ ಪಕ್ಕದಲ್ಲಿರುವ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿದರು.
ಪ್ರಧಾನಿ ಮೋದಿ, ದೋಣಿ ಮೂಲಕ ಪ್ರತಿಮೆ ಸಂಕೀರ್ಣಕ್ಕೆ ಆಗಮಿಸಿದರು ಮತ್ತು ನಂತರ ದೋಣಿ ಸೇವೆಯನ್ನು ಬಳಸಿಕೊಂಡು ದಡ ತಲುಪಿದರು.
ಪ್ರಧಾನಿ ಮೋದಿ ಅವರು ಇಂದು ಸೂರ್ಯೋದಯದ ವೇಳೆ ‘ಸೂರ್ಯ ಅರ್ಘ್ಯ’ ನೀಡುವ ಮೂಲಕ ಎರಡನೇ ಮತ್ತು ಅಂತಿಮ ದಿನದ ಧ್ಯಾನವನ್ನು ಆರಂಭಿಸಿದ್ದರು. ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನದಲ್ಲಿ ನಿರತರಾಗಿದ್ದ ವೇಳೆ ಮೋದಿ ಕೇಸರಿ ಬಟ್ಟೆ ಧರಿಸಿದ್ದರು.
ಕನ್ಯಾಕುಮಾರಿಯು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ ಮತ್ತು ಸ್ಮಾರಕವು ತೀರದ ಸಮೀಪವಿರುವ ಒಂದು ಸಣ್ಣ ದ್ವೀಪದಲ್ಲಿದೆ.