ರಾಷ್ಟ್ರದ ಪ್ರಗತಿಗೆ ಮಹಿಳೆಯರ ಸಬಲೀಕರಣ ಅತ್ಯಗತ್ಯ: ಮೋಹನ್ ಭಾಗವತ್

ಮುಂಬೈ:

     ಪುರುಷ ನಿವೃತ್ತಿವರೆಗೆ ಕೆಲಸ ಮಾಡಿದರೆ ಮಹಿಳೆ ತನ್ನ ಜೀವನದ ಕೊನೆಯವರೆಗೂ ದುಡಿಯುತ್ತಲೇ ಇರುತ್ತಾಳೆ. ರಾಷ್ಟ್ರದ ಪ್ರಗತಿಗೆ ಮಹಿಳೆಯರ ಸಬಲೀಕರಣ   ಅತ್ಯಗತ್ಯ. ಅವರನ್ನು ಪ್ರತಿಗಾಮಿ ಪದ್ದತಿಗಳು  ಮತ್ತು ಸಂಪ್ರದಾಯಗಳಿಂದ  ಮುಕ್ತಗೊಳಿಸಬೇಕಿದೆ. ಮಹಿಳೆಯರು ಪ್ರತಿಯೊಂದು ಸಮಾಜದ ಪ್ರಮುಖ ಭಾಗವಾಗಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣವು ನಿರ್ಣಾಯಕವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ  ಮೋಹನ್ ಭಾಗವತ್  ಹೇಳಿದರು. ಅವರು ಮಹಾರಾಷ್ಟ್ರದ  ಸೋಲಾಪುರದಲ್ಲಿ  ಶುಕ್ರವಾರ ಲಾಭರಹಿತ ಸಂಸ್ಥೆ ಉದ್ಯೋಗವರ್ಧಿನಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮಹಿಳೆ ಜೀವನ ಪೂರ್ತಿ ದುಡಿಯುತ್ತಲೇ ಇರುತ್ತಾಳೆ. ಇದನ್ನು ಮೀರಿ ಆಕೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಾಳೆ. ಮಹಿಳೆಯರ ಪ್ರೀತಿ ಮತ್ತು ವಾತ್ಸಲ್ಯದ ಅಡಿಯಲ್ಲೇ ಮಕ್ಕಳು ಬೆಳೆಯುತ್ತಾರೆ ಮತ್ತು ಪ್ರಬುದ್ಧರಾಗುತ್ತಾರೆ ಎಂದು ಅವರು ಹೇಳಿದರು.

  ದೇವರು ಮಹಿಳೆಯರಿಗೆ ಹೆಚ್ಚುವರಿ ಗುಣವನ್ನು ನೀಡಿದ್ದಾನೆ. ಪುರುಷರಿಗೆ ಸಾಧ್ಯವಾಗದ ಕೆಲಸಗಳನ್ನು ಮಾಡಲು ಅವರಿಗೆ ಶಕ್ತಿ ಕೊಟ್ಟಿದ್ದಾನೆ. ಇದರೊಂದಿಗೆ ದೇವರು ಪುರುಷರಿಗೆ ನೀಡಿರುವ ಎಲ್ಲ ಗುಣಗಳನ್ನು ಮಹಿಳೆಯರಿಗೂ ನೀಡಿದ್ದಾನೆ. ಹೀಗಾಗಿಯೇ ಮಹಿಳೆಯರು ಪುರುಷರು ಮಾಡುವಂತಹ ಪ್ರತಿಯೊಂದು ಕಾರ್ಯವನ್ನೂ ಮಾಡುತ್ತಾರೆ. ಅವರಲ್ಲಿ ಅಷ್ಟೊಂದು ಶಕ್ತಿ ಇದೆ ಎಂದು ಅವರು ತಿಳಿಸಿದರು. 

   ಪುರುಷರು ಮಹಿಳೆಯರನ್ನು ಮೇಲಕ್ಕೆತ್ತುತ್ತೇವೆ ಎಂದು ಹೇಳಿಕೊಳ್ಳುವುದು ಮೂರ್ಖತನ ಎಂದು ಹೇಳಿದ ಭಾಗವತ್, ಈ ರೀತಿಯ ಅಹಂಕಾರ ಪುರುಷರಿಗೆ ಒಳ್ಳೆಯದಲ್ಲ. ಅದಕ್ಕೆ ಕಾರಣವೂ ಇಲ್ಲ. ಮಹಿಳೆಯರು ತಮಗೆ ಬೇಕಾದುದನ್ನು ಮಾಡಲಿ. ಅವರನ್ನು ಸಬಲೀಕರಣಗೊಳಿಸಿ. ಅವರು ಹಿಂಜರಿಯುವಂತೆ ಮಾಡುವ ಪದ್ಧತಿಗಳು ಮತ್ತು ಸಂಪ್ರದಾಯಗಳಿಂದ ಅವರನ್ನು ಮುಕ್ತಗೊಳಿಸಿ. ಒಬ್ಬ ಮಹಿಳೆ ತನ್ನನ್ನು ತಾನು ಮೇಲಕ್ಕೆತ್ತಿಕೊಂಡಾಗ ಅವಳು ಇಡೀ ಸಮಾಜವನ್ನು ಮೇಲಕ್ಕೆತ್ತುತ್ತಾಳೆ ಎಂದು ಅವರು ಹೇಳಿದರು.

   ಇದೇ ಸಂದರ್ಭದಲ್ಲಿ ಅವರು ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಬಲಪಡಿಸುವಲ್ಲಿ ಉದ್ಯೋಗವರ್ಧಿನಿಯ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Recent Articles

spot_img

Related Stories

Share via
Copy link