ಶಬರಿಮಲೆಯಲ್ಲಿ ಮಮ್ಮುಟ್ಟಿಗಾಗಿ ಮೋಹನ್‌ಲಾಲ್‌ ಪ್ರಾರ್ಥನೆ; ಭಾರೀ ಆಕ್ರೋಶ

ತಿರುವನಂತಪುರಂ:

    ಮಲಯಾಳಂ ಹಿರಿಯ ನಟ ಮಮ್ಮುಟ್ಟಿ  ಅವರಿಗಾಗಿ ಸೂಪರ್‌ಸ್ಟಾರ್ ಮೋಹನ್ ಲಾಲ್ ಶಬರಿಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ನಂತರ ವಿವಾದವೊಂದು ಭುಗಿಲೆದ್ದಿದೆ. ಕಳೆದ ಕೆಲವು ದಿನಗಳ ಹಿಂದೆ ನಟ ಮಮ್ಮುಟ್ಟಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಮೋಹನ್‌ ಲಾಲ್‌ ಮಮ್ಮುಟ್ಟಿ ಅವರಿಗಾಗಿ ಶಬರಿಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದು, ಮಮ್ಮುಟ್ಟಿ ಮುಸ್ಲಿಂ ಆಗಿದ್ದು, ಅವರಿಗಾಗಿ ಮೋಹನ್‌ಲಾಲ್‌ ಪ್ರಾರ್ಥನೆ ಸಲ್ಲಿಸಿದ್ದರೆ ಅದು ತಪ್ಪು. ತಕ್ಷಣ ಕ್ಷಮೆಯಾಚಿಸಬೇಕೆಂದು ಅನೇಕರು ಆಗ್ರಹಿಸಿದ್ದಾರೆ. ಇನ್ನು ಈ ವಿರೋಧ ಕೇಳಿ ಬಂದಿರುವ ಬೆನ್ನಲ್ಲೇ ಮೋಹನ್‌ ಲಾಲ್‌ ತಮ್ಮ ನಿಲುವನ್ನು ಸ್ಪಷ್ಟಪಡಿದ್ದಾರೆ. ಪ್ರಾರ್ಥನೆಗಳು ವೈಯಕ್ತಿಕ ಮತ್ತು ನಟ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿಗಳು ಬಂದ ನಂತರ ಪೂಜೆ ನಡೆಸಲಾಯಿತು. ಅವರಿಗಾಗಿ ಪ್ರಾರ್ಥಿಸುವುದರಲ್ಲಿ ತಪ್ಪೇನು? ಎಂದು ಹೇಳಿದ್ದಾರೆ.

    ತಮ್ಮ ಮುಂಬರುವ ‘ಎಲ್ 2: ಎಂಪುರಾನ್’ ಚಿತ್ರದ ಪ್ರಚಾರದಲ್ಲಿರುವ ಮೋಹನ್ ಲಾಲ್, ಮಾರ್ಚ್ 18 ರಂದು ಪ್ರಾರ್ಥನೆ ಸಲ್ಲಿಸಲು ಶಬರಿಮಲೆಗೆ ಹೋಗಿದ್ದರು. ಸಂಧ್ಯಾ ಕಾಲದಲ್ಲಿ, ಅವರು ಮಮ್ಮುಟ್ಟಿ ಅವರ ಜನ್ಮ ಹೆಸರು ಮುಹಮ್ಮದ್ ಕುಟ್ಟಿ ಮತ್ತು ಅವರ ಜನ್ಮ ನಕ್ಷತ್ರ ‘ವಿಶಾಖಂ’ ಅನ್ನು ಹೇಳಿ ಪೂಜೆ ಸಲ್ಲಿಸಿದ್ದರು. ದೇವಸ್ವಂ ಕಚೇರಿಯ ಪೂಜಾ ರಶೀದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಒಂದು ವರ್ಗದ ಬಳಕೆದಾರರು ಇದನ್ನು ಕೋಮು ಸಾಮರಸ್ಯದ ಉದಾಹರಣೆ ಎಂದು ಶ್ಲಾಘಿಸಿದ್ದಾರೆ. ಆದಾಗ್ಯೂ, ಮತ್ತೊಂದು ವಿಭಾಗವು ಮಮ್ಮುಟ್ಟಿ ಮುಸ್ಲಿಂ ಮತ್ತು ಹಿಂದೂ ಪ್ರಾರ್ಥನೆಗಳು ಇಸ್ಲಾಮಿಕ್ ನಂಬಿಕೆಗೆ ಧಕ್ಕೆ ತಂದಂತೆ ಎಂದಿದ್ದರು. ‘ಮಧ್ಯಮಮ್’ ಪತ್ರಿಕೆಯ ಮಾಜಿ ಸಂಪಾದಕ ಓ ಅಬ್ದುಲ್ಲಾ ಈ ಬಗ್ಗೆ ಪ್ರತಿಕ್ರಿಯಿಸಿ, ಮಮ್ಮುಟ್ಟಿ ಅವರ ಪರವಾಗಿ ಪ್ರಾರ್ಥನೆ ಸಲ್ಲಿಸಿದ್ದರೆ ಮೋಹನ್‌ಲಾಲ್‌ ತಕ್ಷಣ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ಯಾರಾದರೂ ಅಲ್ಲಾಹನನ್ನು ಮಾತ್ರ ಪ್ರಾರ್ಥಿಸಬೇಕು ಎಂದು ಅವರು ಇಸ್ಲಾಮಿಕ್ ಕಾನೂನುಗಳನ್ನು ಉಲ್ಲೇಖಿಸಿದರು. ವೃತ್ತಿಪರ ಪೈಪೋಟಿಯ ಹೊರತಾಗಿಯೂ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಉತ್ತಮ ಬಾಂದವ್ಯ ಹೊಂದಿದ್ದಾರೆ.

    ಮಾಲಿವುಡ್‌ ಮೆಗಾಸ್ಟಾರ್‌, ಬಹುಭಾಷಾ ಕಲಾವಿದ, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಭಿನಯಿಸಿರುವ ಮಮ್ಮುಟ್ಟಿ   ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವದಂತಿ ಹರಡಿತ್ತು. ಇದೇ ಕಾರಣಕ್ಕೆ ಅವರು ಸದ್ಯ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸುದ್ದಿ ಕೇಳಿ ಅವರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು. ಇದೀಗ ಮಮ್ಮುಟ್ಟಿ ಆಪ್ತರು ಈ ವದಂತಿಯನ್ನು ತಳ್ಳಿ ಹಾಕಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ರಮ್ಜಾನ್‌‌ ಉಪವಾಸದ ಕಾರಣ ಅವರು ಸದ್ಯ ಶೂಟಿಂಗ್‌ಗೆ ಬ್ರೇಕ್‌ ನೀಡಿದ್ದಾರೆ, ಅದಾದ ಬಳಿಕ ಎಂದಿನಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದರು. 

    73 ವರ್ಷದ ಮಮ್ಮುಟ್ಟಿ ಈಗಲೂ ಯುವಕರು ನಾಚುವಂತೆ ಫಿಟ್‌ & ಫೈನ್‌ ಆಗಿದ್ದಾರೆ. ಈ ಮಧ್ಯೆ ಕ್ಯಾನ್ಸರ್‌ ವದಂತಿ ಹರಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು. ಇದೀಗ ಅವರ ತಂಡ ಈ ಗಾಳಿಸುದ್ದಿಯನ್ನು ನಿರಾಕರಿಸಿ, ಇದೊಂದು ವದಂತಿಯಷ್ಟೇ. ರಮ್ಜಾನ್‌ ಉಪವಾಸ ಕೈಗೊಂಡಿರುವ ಕಾರಣ ಅವರು ರಜೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ರಮ್ಜಾನ್‌ ಬಳಿಕ ತಾವು ಒಪ್ಪಿಕೊಂಡಿರುವ ಮಹೇಶ್‌ ನಾರಾಯಣ ನಿರ್ದೇಶನದ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂನ ಮತ್ತೋರ್ವ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ ಕೂಡ ನಟಿಸುತ್ತಿದ್ದಾರೆ. ಯಾರೂ ಆಧಾರ ರಹಿತ ಗಾಳಿ ಸುದ್ದಿಯನ್ನು ನಂಬಬೇಡಿ ಮತ್ತು ಹರಡಬೇಡಿʼʼ ಎಂದು ಮನವಿ ಮಾಡಿದ್ದರು.

Recent Articles

spot_img

Related Stories

Share via
Copy link