ಶಿರಾ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮೂಹೂರ್ತ ಫಿಕ್ಸ್

ಶಿರಾ:
ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳ ನಡುವೆ ತರಾವರಿ ಕಸರತ್ತು

ನಗರಸಭೆಯ ಸದಸ್ಯರ ಚುನಾವಣೆ ನಡೆದು 2 ತಿಂಗಳು ಕಳೆದಿದ್ದು, ಅಧ್ಯಕ್ಷ ಸ್ಥಾನವನ್ನು ಪ.ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಆದೇಶ ಹೊರಡಿಸಲಾಗಿತ್ತು.

ಹೇಗಾದರೂ ಸರಿ ಈ ಹಿಂದೆ ಆದೇಶವಾಗಿದ್ದ ಮೀಸಲಾತಿಯನ್ನು ಬದಲಾವಣೆ ಮಾಡಿ ಬಿ.ಸಿ.ಎಂ.(ಬಿ) ಮಹಿಳೆಗೆ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿದ್ದ ಆಡಳಿತಾರೂಢ ಬಿ.ಜೆ.ಪಿ. ವರಿಷ್ಠರ ಕಸರತ್ತಿನ ಹಿನ್ನೆಲೆಯಲ್ಲಿ ಎರಡು ತಿಂಗಳಿಂದಲೂ ಇಲ್ಲಿನ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯು ನನೆಗುದಿಗೆ ಬೀಳಲು ಕಾರಣವಾಗಿತ್ತು.

ನಗರಸಭೆಯ 31 ವಾರ್ಡ್‍ಗಳ ಪೈಕಿ 21ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಾಂದ್‍ಪಾಷಾ ಅವರು ನಿಧನರಾದ ಹಿನ್ನೆಲೆಯಲ್ಲಿ ಆ ವಾರ್ಡಿನ ಚುನಾವಣೆ ಮಾತ್ರ ಮುಂದೂಡಲ್ಪಟ್ಟಿತ್ತು. ಈ ಪರಿಣಾಮ 30 ಮಂದಿ ಸದಸ್ಯರು ಆಯ್ಕೆಗೊಂಡು ಕಳೆದ ಎರಡು ತಿಂಗಳಿನಿಂದಲೂ ನಗರಸಭೆಯ ಬಾಗಿಲು ದಾಟಿ ಒಳ ಹೋಗಿ ಕುರ್ಚಿಯಲ್ಲಿ ಕೂರಲಾಗದೆ ಪರಿತಪಿಸುತ್ತಿದ್ದರು.

ಡಿ.27 ರಂದು ನಡೆದ ನಗರಸಭೆಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರದೆ ಮೂರೂ ಪಕ್ಷಗಳ ಮುಖಂಡರಿಗೆ ಒಂದು ರೀತಿಯಲ್ಲಿ ಮುಖಭಂಗವಾಗುವಂತೆ 8 ಮಂದಿ ಸ್ವತಂತ್ರ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಬಿ. ಫಾರಂ ಇಲ್ಲದಿದ್ದರೂ ಗೆದ್ದು ಬೀಗುವ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದರು.

ಸದರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 11 ಮಂದಿ, ಜೆ.ಡಿ.ಎಸ್. ಪಕ್ಷದ 7 ಮಂದಿ ಹಾಗೂ ಬಿ.ಜೆ.ಪಿ.ಯ 4 ಮಂದಿ ಸದಸ್ಯರು ಆಯ್ಕೆಗೊಂಡಿದ್ದರೆ, 8 ಮಂದಿ ಸದಸ್ಯರು ಸ್ವತಂತ್ರವಾಗಿ ನಿಂತು ಆಯ್ಕೆಗೊಂಡು ಯಾವುದೇ ಪಕ್ಷಕ್ಕೆ ಬಹುಮತವಿಲ್ಲದೆ ನಗರಸಭೆಯನ್ನು ಅತಂತ್ರ ಸ್ಥಿತಿಗೆ ತಂದಿಟ್ಟಿದ್ದಾರೆ.

ಡಿ.27 ರ ನಂತರದ ದಿನದಿಂದಲೂ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಮರೂ ಪಕ್ಷಗಳಲ್ಲಿ ನಾನಾ ಕÀಸರತ್ತುಗಳೆ ನಡೆದವು. ಜೆ.ಡಿ.ಎಸ್. ಹಾಗೂ ಬಿ.ಜೆ.ಪಿ. ಪಕ್ಷಕ್ಕಿಂತಲೂ ಒಂದಿಷ್ಟು ಹೆಚ್ಚಿಗೆ ಸದಸ್ಯರನ್ನು ಗೆಲ್ಲಿಸಿಕೊಂಡ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಕೂಡ ಕಳೆದ ನಗರಸಭೆಯ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿದ ಪರಿಣಾಮ ನಿಚ್ಚಳ ಬಹುಮತವಿಲ್ಲದ ಕಾಂಗ್ರೆಸ್ ಒಳಗೊಳಗೆ ತಳಮಳಿಸುತ್ತಿತ್ತು.

ಕಳೆದ ಅನೇಕ ನಗರಸಭೆಯ ಚುನಾವಣೆಗಳಲ್ಲಿ ಬಹುಮತಗಳನ್ನು ಪಡೆದು ಗೆದ್ದು ಬೀಗುತ್ತಿದ್ದ ಕಾಂಗ್ರೆಸ್ ಹೀನಾಯವಾಗಿ ಸ್ಥಾನಗಳನ್ನು ಕಳೆದುಕೊಳ್ಳಲು ಅದೇ ಕಾಂಗ್ರೆಸ್ ಪಕ್ಷದೊಳಗಿನ ಮುಖಂಡರುಗಳೇ ಕಾರಣರಾದರು. ಅತಿ ಹೆಚ್ಚು ಸ್ಥಾನಗಳನ್ನು ಈ ಬಾರಿಯೂ ಗೆಲ್ಲುತ್ತೇವೆಂದು ಬೀಗುತ್ತಿದ್ದ ಜಯಚಂದ್ರ ಅವರಿಗೆ ಅವರದೇ ಪಕ್ಷದ ಕೆಲ ಮುಖಂಡರು ಬೆನ್ನಿಗೆ ಚೂರಿ ಹಾಕಿದ್ದರು.

ನಗರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ವಂಚಿತರಾಗಿ ಸ್ವತಂತ್ರವಾಗಿ ಚುನಾವಣೆಯಲ್ಲಿ ನಿಂತು ಜಯಗಳಿಸಿದ 7 ಮಂದಿ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಿದ್ದರಾದರೂ ಈ 7 ಮಂದಿಗೂ ಟಿಕೆಟ್ ನೀಡದೆ ಕಾಂಗ್ರೆಸ್ ವರಿಷ್ಠರು ತಪ್ಪು ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣವಾಗಿತ್ತು.
ಇಂತಹ ಸಂದಿಗ್ದ ಸ್ಥಿತಿಯಲ್ಲೂ ಪಕ್ಷದಿಂದ ಟಿಕೆಟ್ ವಂಚಿತರಾಗಿ ಆಯ್ಕೆಗೊಂಡ ಸ್ವತಂತ್ರ ಅಭ್ಯರ್ಥಿಗಳಿಗೆ ಗಾಳ ಹಾಕಿ ತಮ್ಮಲ್ಲೆ ಉಳಿಸಿಕೊಳ್ಳಲು ಕಾಂಗ್ರೆಸ್ ಕಳೆದ ಎರಡು ತಿಂಗಳಿಂದಲೂ ತರಾವರಿ ಕಸರತ್ತು ನಡೆಸಿತ್ತು.

ಇತ್ತ 7 ಸ್ಥಾನಗಳನ್ನು ಪಡೆದ ಜೆ.ಡಿ.ಎಸ್. ಪಕ್ಷವು ಆಯ್ಕೆಗೊಂಡಿದ್ದ ಕೇವಲ 4 ಮಂದಿ ಬಿ.ಜೆ.ಪಿ. ಸದಸ್ಯರೊಡಗೂಡಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ತಯಾರಿ ನಡೆಸಲಾಗಿತ್ತು.

ಇನ್ನು ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣಾ ದಿನಾಂಕ ನಿಗದಿಯಾಗದಿದ್ದರೂ ಅಧ್ಯಕ್ಷ ಸ್ಥಾನದ ಆಸೆ ಇದ್ದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಗಳು ಗೆದ್ದ ಮಾರನೇ ದಿನದಿಂದಲೇ ಕಿಸೆಯಿಂದ ದುಡ್ಡು ಖಾಲಿ ಮಾಡಿಕೊಂಡು ಅಧಿಕಾರದ ಆಸೆಗೆ ಗೆದ್ದ ಸದಸ್ಯರ ಬೆನ್ನಿಗೆ ಬಿದ್ದು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದರು.

ಕೇವಲ ನಾಲ್ಕು ಸ್ಥಾನಗಳನ್ನು ಪಡೆದು ಅಧಿಕಾರದ ಆಸೆಯ ಹಿಂದೆ ಬಿದ್ದ ಬಿ.ಜೆ.ಪಿ. ಹೇಗಾದರೂ ಸರಿ ಅಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷದ ಅಭ್ಯರ್ಥಿಗೆ ಉಳಿಸಿಕೊಳ್ಳಬೇಕೆಂದು ಚಡಪಡಿಸುತ್ತಿತ್ತು.

ಮೀಸಲಾತಿಯ ಬದಲಾವಣೆಯ ವಾಸನೆ ನಗರಸಭೆಗೆ ಆಗಾಗ ಬಡಿಯುತ್ತಿತ್ತು. ಈ ನಡುವೆ 4 ಸ್ಥಾನಗಳನ್ನು ಪಡೆದ ಬಿ.ಜೆ.ಪಿ. ತನ್ನ ಬಹುಮತ ಹೆಚ್ಚಿಸಿಕೊಳ್ಳಲು ಮಹತ್ವದ ತಂತ್ರಗಾರಿಕೆಯನ್ನೂ ನಡೆಸಿತು.

4 ಮಂದಿ ಸದಸ್ಯರ ಜೊತೆಗೆ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ, ಸಂಸದ ನಾರಾಯಣಸ್ವಾಮಿ, ವಿ.ಪ. ಸದಸ್ಯರಾದ ಚಿದಾನಂದ್ ಎಂ.ಗೌಡ ಹಾಗೂ ಜೆ.ಡಿ.ಎಸ್. ಪಕ್ಷದ ಕೆ.ಎ.ತಿಪ್ಪೇಸ್ವಾಮಿ ಅವರ ಮತಗಳನ್ನೂ ಗಣನೆಗೆ ತೆಗೆದುಕೊಂಡು 11 ಮತಗಳನ್ನು ಒಟ್ಟುಗೂಡಿಸಿ ಉಳಿದ ಸದಸ್ಯರಿಗೆ ಗಾಳ ಹಾಕಿ ಅಧಿಕಾರದ ಗದ್ದುಗೆ ಹಿಡಿಯಲು ತಂತ್ರ ನಡೆಸಿತು.್ತ

ಆದರೆ ಚಿದಾನಂದಗೌಡರ ಮತ ಹಾಗೂ ಕೆ.ಎ.ತಿಪ್ಪೇಸ್ವಾಮಿಯವರ ಮತಗಳು ಜಿಲ್ಲೆಯಿಂದ ಹೊರಗುಳಿದ ಪರಿಣಾಮ ಅವರು ಶಿರಾ ನಗರಸಭೆಗೆ ಮತ ಹಾಕಲು ನಿಯಮಾನುಸಾರ ಆಗ ಸಾಧ್ಯವಾಗಿರಲಿಲ್ಲ.

ಇದೀಗ ಅಂತೂ ಇಂತು ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿಯೇ ಬಿಟ್ಟಿದೆ. ಮಾರ್ಚ್ 10 ರಂದು ಚುನಾವಣೆ ನಡೆಸಲು ಅಧಿಸೂಚನೆಯೂ ಹೊರ ಬಿದ್ದಿದ್ದು ಎಲ್ಲಾ ಪಕ್ಷದ ಸದಸ್ಯರಲ್ಲಿ ಇದೀಗ ಮಿಂಚಿನ ಸಂಚಾರ ಉಂಟಾಗಿದೆ.

ಮಾರ್ಚ್ 10 ರ ಗುರುವಾರ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು, ಮಧ್ಯಾಹ್ನ 1.15ಕ್ಕೆ ನಾಮಪತ್ರ ಪರಿಶೀಲನೆ, ಅದೇ ದಿನ ಮಧ್ಯಾಹ್ನ 1.15 ರಿಂದ 1.25ರೊಳಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶವಿದ್ದು, ಅಗತ್ಯವಿದ್ದರೆ ಅದೇ ದಿನ ಮಧ್ಯಾಹ್ನ 1.30ಕ್ಕೆ ನಗರಸಭಾ ಸಭಾಂಗಣದಲ್ಲಿ ಮತದಾನ ನಡೆಯಲಿದೆ. ಮತದಾನ ಮುಗಿದ ನಂತರ ಮತ ಎಣಿಕೆಯೂ ನಡೆಯಲಿದೆ.

ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ದಿನಾಂಕ ಘೋಷಣೆಯಾಗಿ ಇದರೊಟ್ಟಿಗೆ ಮತದಾರರ ಪಟ್ಟಿಯನ್ನು ಕೂಡ ಚುನಾವಣಾ ಆಯೋಗ ಪ್ರಕಟಿಸಿದ ಕೂಡಲೇ ಕೇವಲ 4 ಸದಸ್ಯರನ್ನು ಹೊಂದಿದ್ದ ಬಿ.ಜೆ.ಪಿ. ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.

ಅತ್ಯಂತ ಮಹತ್ವದ ಬೆಳವಣಿಗೆಯಿಂದಾಗಿ ಚುನಾವಣಾ ಆಯೋಗವು ನೀಡಿದ ಅವಕಾಶದಿಂದ ಬಿ.ಜೆ.ಪಿ.ಯ ಚಿದಾನಂದ್ ಎಂ.ಗೌಡ ಹಾಗೂ ಜೆ.ಡಿ.ಎಸ್. ಪಕ್ಷದ ಕೆ.ಎ.ತಿಪ್ಪೇಸ್ವಾಮಿ ಅವರಿಗೆ ಮತ ಚಲಾಯಿಸಲು ಆಯೋಗ ಅವಕಾಶ ನೀಡಿದ ಪರಿಣಾಮ, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಪಕ್ಷಕ್ಕೆ ಒಂದಿಷ್ಟು ಬಲ ಬಂದಂತಾಗಿದೆ.

ಒಟ್ಟಾರೆ ಶಾಸಕರು, ಸಂಸದರು, ವಿ.ಪ. ಸದಸ್ಯರು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲು ಜೆ.ಡಿ.ಎಸ್. ಹಾಗೂ ಬಿ.ಜೆ.ಪಿ. ಹೊರಟಿದ್ದರೆ ತಮ್ಮದೇ ಪಕ್ಷದಿಂದ ಟಿಕೇಟ್ ವಂಚಿತರಾಗಿ ಸ್ವತಂತ್ರವಾಗಿ ಆಯ್ಕೆಗೊಂಡವರನ್ನು ಸೆಳೆದುಕೊಳ್ಳಲು ಕಾಂಗ್ರೆಸ್ ನೇರ ಕಸರತ್ತು ನಡೆಸಿದೆ.

ಅತ್ತ ಕಾಂಗ್ರೆಸ್ ಸ್ವತಂತ್ರರನ್ನು ಸೆಳೆಯಲು ನೇರ ಕಸರತ್ತು ನಡೆಸುತ್ತಿರುವುದು ಒಂದು ಕಡೆಯಾದರೆ, ಇದೇ ಸ್ವತಂತ್ರ ಅಭ್ಯರ್ಥಿಗಳನ್ನು ಬರ ಸೆಳೆಯಲು ಬಿ.ಜೆ.ಪಿ.-ಜೆ.ಡಿ.ಎಸ್. ಜಂಟಿ ಪ್ರಯತ್ನ ನಡೆಸಿದ್ದು, ಈ ಎಲ್ಲಾ ಸಿನಿಮಾ ಹಾಗೂ ಡ್ರಾಮಾ ಸೀನರಿಗಳನ್ನು ನೋಡಿ ಸವಿಯುವ ಕುತೂಹಲ ನಗರದ ಮತದಾರರದ್ದಾಗಿದೆ.

ಕಳೆದ ಅನೇಕ ನಗರಸಭೆಯ ಚುನಾವಣೆಗಳಲ್ಲಿ ಬಹುಮತಗಳನ್ನು ಪಡೆದು ಗೆದ್ದು ಬೀಗುತ್ತಿದ್ದ ಕಾಂಗ್ರೆಸ್ ಹೀನಾಯವಾಗಿ ಸ್ಥಾನಗಳನ್ನು ಕಳೆದುಕೊಳ್ಳಲು ಅದೇ ಕಾಂಗ್ರೆಸ್ ಪಕ್ಷದೊಳಗಿನ ಮುಖಂಡರುಗಳೇ ಕಾರಣರಾದರು.

ಅತಿ ಹೆಚ್ಚು ಸ್ಥಾನಗಳನ್ನು ಈ ಬಾರಿಯೂ ಗೆಲ್ಲುತ್ತೇವೆಂದು ಬೀಗುತ್ತಿದ್ದ ಜಯಚಂದ್ರ ಅವರಿಗೆ ಅವರದೇ ಪಕ್ಷದ ಕೆಲ ಮುಖಂಡರು ಬೆನ್ನಿಗೆ ಚೂರಿ ಹಾಕಿದ್ದರು.

ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ದಿನಾಂಕ ಘೋಷಣೆಯಾಗಿ ಇದರೊಟ್ಟಿಗೆ ಮತದಾರರ ಪಟ್ಟಿಯನ್ನು ಕೂಡ ಚುನಾವಣಾ ಆಯೋಗ ಪ್ರಕಟಿಸಿದ ಕೂಡಲೆ ಕೇವಲ 4 ಸದಸ್ಯರನ್ನು ಹೊಂದಿದ್ದ ಬಿ.ಜೆ.ಪಿ. ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.

 – ಬರಗೂರು ವಿರೂಪಾಕ್ಷ

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link