IPL ಸೇರಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಮೋಹಿತ್ ಶರ್ಮಾ ನಿವೃತ್ತಿ ಘೋಷಣೆ

ಮುಂಬೈ:

    ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಅವರು ಐಪಿಎಲ್ ಸೇರಿ ಎಲ್ಲಾ ಮಾದರಿಯ ಕ್ರಿಕೆಟ್‌’ಗೆ ನಿವೃತ್ತಿ ಘೋಷಿಸಿದ್ದಾರೆ.

   ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋಹಿತ್ ಅವರು, ಇಂದಿನಿಂದ, ನಾನು ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ. ಹರಿಯಾಣವನ್ನು ಪ್ರತಿನಿಧಿಸುವುದರಿಂದ ಹಿಡಿದು ಭಾರತೀಯ ಜೆರ್ಸಿ ಧರಿಸಿ, ಐಪಿಎಲ್‌ನಲ್ಲಿ ಆಡುವವರೆಗೆ, ನನಗೆ ತುಂಬಾ ಸವಲತ್ತು ಸಿಕ್ಕಿದೆ. ತಮ್ಮ ಕ್ರಿಕೆಟ್ ವೃತ್ತಿಜೀವನದ ಬೆನ್ನೆಲುಬಾಗಿರುವ ಹರಿಯಾಣ ಕ್ರಿಕೆಟ್ ಅಸೋಸಿಯೇಷನ್‌ಗೆ ಧನ್ಯವಾದ ಅರ್ಪಿಸುತ್ತೇನೆಂದು ಹೇಳಿದ್ದಾರೆ.

   ಇದೇ ವೇಳೆ ಬಿಸಿಸಿಐ, ಐಪಿಎಲ್ ಫ್ರಾಂಚೈಸಿಗಳು, ತಮ್ಮ ಸಹ ಆಟಗಾರರು, ತರಬೇತುದಾರರು, ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ತಮ್ಮ ಕ್ರಿಕೆಟ್ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಅವರು ಕೃತಜ್ಞತೆ ಅರ್ಪಿಸಿದ್ದಾರೆ.

  ಮೋಹಿತ್ ಶರ್ಮಾ ಅವರು, 2015ರ ವಿಶ್ವಕಪ್ ಸೇರಿದಂತೆ 26 ಏಕದಿನ ಪಂದ್ಯಗಳಲ್ಲಿ ಭಾರತದ ಪರವಾಗಿ ಆಟವಾಡಿದ್ದಾರೆ. ಅಲ್ಲದೆ, 32.90 ಸರಾಸರಿಯಲ್ಲಿ 31 ವಿಕೆಟ್‌ ಗಳನ್ನು ಉರುಳಿಸಿದ್ದಾರೆ. ಎಂಟು ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳಲ್ಲಿಯೂ ಆಡಿದ್ದು, ಆರು ವಿಕೆಟ್‌ ಗಳನ್ನು ಗಳಿಸಿದ್ದಾರೆ. ಮೋಹಿತ್, 2013ರಲ್ಲಿ ಝಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದೊಂದಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅದಕ್ಕೂ ಮೊದಲು, ಎರಡು ವರ್ಷಗಳ ಕಾಲ ಹರ್ಯಾಣ ತಂಡದಲ್ಲಿ ದೇಶಿ ಕ್ರಿಕೆಟ್ ಆಡಿದ್ದರು. 

   ಮೋಹಿತ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲೂ ಆಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 2013 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಮೋಹಿತ್, ಮೊದಲ ಐಪಿಎಲ್ ಋತುವಿನಲ್ಲಿಯೇ ಅದ್ಭುತ ಪ್ರದರ್ಶನ ನೀಡಿದರು.

    ಬಳಿಕ ಗುಜರಾತ್ ಟೈಟಾನ್ಸ್‌ ಗೆ ಸೇರ್ಪಡೆಗೊಂಡರು. 2023ರಲ್ಲಿ ಅವರು ಐಪಿಎಲ್‌ನಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದು, ಜಂಟಿ ಎರಡನೇ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದರು.

Recent Articles

spot_img

Related Stories

Share via
Copy link