ಬೆಂಗಳೂರು :
ಮೋಕ್ಷಿತಾ ಪೈ ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗ ಒಂದು ಸುದ್ದಿ ಸಾಕಷ್ಟು ಹರಿದಾಡಿತ್ತು. ಅವರು ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಹಳೆಯ ಘಟನೆಯನ್ನು ಮತ್ತೆ ವೈರಲ್ ಮಾಡಲಾಯಿತು. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳ ಕಳ್ಳಿ ಎಂದವರ ಬಗ್ಗೆ ಮೋಕ್ಷಿತಾ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಪ್ರಕರಣದ ಹಿನ್ನೆಲೆ ಏನು ಎಂಬುದನ್ನು ಅವರು ಸಂಪೂರ್ಣವಾಗಿ ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಈ ಮೊದಲು ಮೋಕ್ಷಿತಾ ಅವರು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಆಗ ಅವರ ಹೆಸರು ಮೋಕ್ಷಿತಾ ಎಂದು ಕೂಡ ಇರಲಿಲ್ಲ. ಬಾಯ್ಫ್ರೆಂಡ್ ಜೊತೆ ಸೇರಿ ಅವರು ಟ್ಯೂಷನ್ಗೆ ಬರುತ್ತಿದ್ದ ಮಗುವನ್ನು ಅಪಹರಣ ಮಾಡಿದ್ದರು ಎನ್ನುವ ಆರೋಪ ಎದುರಿಸಿದ್ದರು. ಈ ಘಟನೆ ನಡೆದು ಹಲವು ವರ್ಷಗಳು ಕಳೆದಿವೆ. ಇದನ್ನು ಮತ್ತೆ ವೈರಲ್ ಮಾಡಲಾಗಿತ್ತು. ‘ಮೋಕ್ಷಿತಾ ನಿಜವಾದ ಮುಖ’ ಎಂದು ಟ್ರೋಲ್ ಮಾಡುವ ಕೆಲಸ ಆಗಿತ್ತು. ಇದು ಅವರ ಕುಟುಂಬದ ಚಿಂತೆಗೆ ಕಾರಣ ಆಗಿತ್ತು.
ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿರೋ ಮೋಕ್ಷಿತಾ ಅವರು ಈ ಬಗ್ಗೆ ಉತ್ತರ ನೀಡಿದ್ದಾರೆ. ‘ನಾನು ನಿರಪರಾಧಿ ಎಂದು ಕೋರ್ಟ್ ಹೇಳಿದೆ. ಆದಾಗ್ಯೂ ಮತ್ತೆ ಅದೇ ಪ್ರಕರಣದ ಬಗ್ಗೆ ಮಾತನಾಡುತ್ತಾರೆ ಎಂದರೆ ನನ್ನ ಕೆಳಗೆ ಹಾಕೋಕೆ ನೋಡ್ತಿದ್ದಾರೆ. ನನ್ನ ಅಭಿಮಾನಿಗಳೇ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ‘ನನ್ನ ಅಭಿಮಾನಿಗಳು ಮೇಲೆ ಇಟ್ಟಿದ್ದಾರೆ. ಅದಕ್ಕೆ ತುಂಬಾ ಖುಷಿ ಇದೆ’ ಎಂದು ಮೋಕ್ಷಿತಾ ಹೇಳಿದ್ದಾರೆ.
‘ಒಬ್ಬರನ್ನು ಯಾಕೆ ಕೆಳಗೆ ಹಾಕೋಕೆ ನೋಡ್ತಾರೆ. ನಮಗೆ ಈ ರೀತಿ ಮಾಡೋಕೆ ಏಕೆ ನೋಡ್ತಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಅವರಿಗೆ ಇದರಿಂದ ಲಾಭ ಇರಬಹುದು. ನನ್ನವರಿಗೆ ನಾನು ಏನು ಅಂತ ಗೊತ್ತು’ ಎಂದು ಮೋಕ್ಷಿತಾ ನೇರ ಮಾತುಗಳಲ್ಲಿ ಹೇಳಿದ್ದಾರೆ.