ಮೇಕೆದಾಟು ಯೋಜನೆ ಜಾರಿಗೆ ಆಂದೋಲನ

ತುಮಕೂರು:

ಜ.9 ರಿಂದ 19 ರವರೆಗೆ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ

                      ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ರೈತರು, ಜನರನ್ನು ಉಳಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಜಾರಿ ಅತ್ಯವಶ್ಯಕವಾಗಿದ್ದು, ಯೋಜನೆ ಜಾರಿಗೆ ಆಂದೋಲನದ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಲು ಜ. 9 ರಿಂದ 19ರ ವರೆಗೆ ಕೆಪಿಸಿಸಿ ವತಿಯಿಂದ ಮೇಕೆದಾಟಿನಿಂದ ಬೆಂಗಳೂರಿನವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರಸ್ತಾಪಿಸಲಾದ 66 ಟಿಎಂಸಿ ನೀರು ಸಂಗ್ರಹದ ಯೋಜನೆ. ಸಮ್ಮಿಶ್ರ ಸರಕಾರದಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ಯೋಜನೆಗೆ ಪರಿಷ್ಕøತ ಡಿಪಿಆರ್ ಂi ಸಹ ತಯಾರಿಸಲಾಯಿತು.

ಆದರೆ ಕೇಂದ್ರದ ಪರಿಸರ ಇಲಾಖೆ ಅನುಮತಿ ವಿಳಂಬದಿಂದ ಯೋಜನೆ ನನೆಗುದಿಗೆ ಬಿದ್ದಿದೆ. ಯೋಜನೆ ಜಾರಿಯಿಂದ ಕರ್ನಾಟಕ, ತಮಿಳುನಾಡು ಉಭಯ ರಾಜ್ಯದವರಿಗೂ ಅನುಕೂಲವಾಗಲಿದೆ. ರಾಜ್ಯದಲ್ಲಿ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಹಾಯಕವಾಗಿ ಕೃಷಿ ಜಮೀನಿನಲ್ಲಿ ಅಂತರ್ಜಲವೃದ್ಧಿಯಾದರೆ, ಡ್ಯಾಂ ಸ್ಥಳದಿಂದ 2 ಕಿ.ಮೀ. ಅಂತರದಲ್ಲಿ ಸಿಗುವ ತಮಿಳುನಾಡು ಭಾಗದಲ್ಲೂ ಅಂತರ್ಜಲ ವೃದ್ಧಿ ಮತ್ತು ಆ ರಾಜ್ಯಕ್ಕೆ ಹರಿಸಬೇಕಾದ ನೀರಿಗೆ ಯಾವುದೇ ರೀತಿ ಸಮಸ್ಯೆ ಉದ್ಬವಿಸುವುದಿಲ್ಲ. ಈಕಾರಣಕ್ಕಾಗಿ ಕೇಂದ್ರದ ಪರಿಸರ ಇಲಾಖೆ ತ್ವರಿತ ಅನುಮತಿ ನೀಡಿ ಯೋಜನೆಗೆ ಚಾಲನೆ ಕೊಡಬೇಕು ಎಂದ ಆಗ್ರಹಿಸಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.

ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಸುತ್ತಿರುವ ಪಾದಯಾತ್ರೆ ಪಕ್ಷಾತೀತವಾಗಿದ್ದು, ಎಲ್ಲ ಪಕ್ಷದವರು, ಸಾಹಿತಿಗಳು, ಚಿತ್ರರಂಗದವರು, ಸಂಘ ಸಂಸ್ಥೆಗಳವರು ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಸಿಎಲ್‍ಪಿ ನಾಯಕರು, ಪರಮೇಶ್ವರ್ ಅವರ ಆದಿಯಾಗಿ ಕಾವೇರಿ ನದಿ ಪಾತ್ರ ವ್ಯಾಪ್ತಿಯ ಕಾಂಗ್ರೆಸ್ ಎಲ್ಲಾ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು,ಪಕ್ಷದ ಮುಖಂಡರೆಲ್ಲರೂ ಪಾದಯಾತ್ರೆಯಲ್ಲಿ ಸರತಿಯಲ್ಲಿ ಭಾಗವಹಿಸಲಿದ್ದಾರೆಂದರು.

ಧರ್ಮಗುರುಗಳಿಗೂ ಆಹ್ವಾನ:

ಈ ಪಾದಯಾತ್ರೆಗೆ ಆದಿಚುಂಚನಗಿರಿ ಮಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲನಾನಂದನಾಥ ಸ್ವಾಮೀಜಿಯವರನ್ನು ಆಹ್ವಾನಿಸಿದ್ದು ಇತರೆ ಮಠಗಳ ಮಠಾಧೀಶರನ್ನು ಆಹ್ವಾನಿಸುತ್ತೇವೆ. ಈ ಪಾದಯಾತ್ರೆ ಕೇವಲ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಇದೊಂದು ರಾಜ್ಯದ ಹಿತಕ್ಕಾಗಿ ನಡೆಯುತ್ತಿರುವ ಚಳವಳಿ. ಹಾಗಾಗಿ ಈ ಹೋರಾಟದಲ್ಲಿ ಎಲ್ಲ ಮಠಾಧೀಶರು, ಧಾರ್ಮಿಕ ಮುಖಂಡರುಗಳು ಸಹ ಭಾಗವಹಿಸುವಂತೆ ಮನವಿ ಮಾಡಿದರು.

ಕುಡಿಯುವ ನೀರಿನ ಯೋಜನೆಗೆ ಇಲಾಖೆಗಳ ಎನ್‍ಓಸಿ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಬಹಿರಂಗ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೇ ಕೇಂದ್ರದ ಮೇಲೆ ಒತ್ತಡ ಹೇರಿ ಪರಿಸರ ಇಲಾಖೆ ಅನುಮತಿ ಪಡೆಯಬೇಕು ಎಂದರು.

ಕಾಂಗ್ರೆಸ್ ಸದಸ್ಯತ್ವ ಅಭಿಯಾನ:

ಪಕ್ಷದೊಳಗೆ ಬ್ಲಾಕ್ ಕಾಂಗ್ರೆಸ್‍ನಿಂದ ಹಿಡಿದು ಎಐಸಿಸಿವರೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸದಸ್ಯತ್ವ ಅಭಿಯಾನವನ್ನು ವಿಶೇಷವಾಗಿ ಹಮ್ಮಿಕೊಂಡಿದ್ದು, ನಾಯಕರಿಂದ ಕಾರ್ಯಕರ್ತರವರೆಗೆ ಎಲ್ಲರೂ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಎಐಸಿಸಿ ಅಧ್ಯಕ್ಷರು ಕರೆ ನೀಡಿರುವ ಈ ಅಭಿಯಾನವನ್ನು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು, ಮುಖಂಡರು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆಂದರು.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, 2022ರ ಸೆ. 22 ರಂದು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಕೆಪಿಸಿಸಿಗೆ ನೀಡಿರುವ ಸೂಚನೆಯಂತೆ ಸದಸ್ಯತ್ವ ನೋಂದಣಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯರ ನೋಂದಣಿ ಮಾಡಿಸುವುದಾಗಿ ಅಧ್ಯಕ್ಷರಿಗೆ ಭರವಸೆ ನೀಡಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ವೆಂಕಟರಮಣಪ್ಪ, ಡಾ. ಎಚ್.ಡಿ.ರಂಗನಾಥ್, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ, ಟಿ.ಬಿ. ಜಯಚಂದ್ರ, ಕೆ. ಷಡಕ್ಷರಿ, ಎಸ್. ಷಫಿಅಹಮದ್, ಬಿ.ಜಿ.ಗೋವಿಂದಪ್ಪ, ಎಂ.ಡಿ.ಲಕ್ಷ್ಮೀನಾರಾಯಣ,

ಡಾ. ರಫೀಕ್ ಅಹಮದ್, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ, ಕೆಪಿಸಿಸಿ ಉಪಾಧ್ಯಕ್ಷ . ರಾಧಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಮುಖಂಡರಾದ ಮುರುಳೀಧರ ಹಾಲಪ್ಪ, ಹೊನ್ನಗಿರಿಗೌಡ, ಇಕ್ಬಾಲ್ ಅಹಮದ್, ಚಂದ್ರಶೇಖರಗೌಡ ಗೀತಾರುದ್ರೇಶ್. ಯುವ ಕಾಂಗ್ರೆಸ್‍ನ ಶಶಿ ಹುಲಿಕುಂಠೆ, ಎನ್‍ಎಸ್‍ಯುಐನ ಸುಮುಖ ಕೊಂಡವಾಡಿ, ವಿಪಕ್ಷ ನಾಯಕ ಕುಮಾರ್ ಸೇರಿ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

1 ಕೋಟಿ ದಾಟಿರುವ ರಾಜಧಾನಿ ಬೆಂಗಳೂರಿನ ಜನತೆಗೆ ಈ ಯೋಜನೆಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಹೋರಾಟ ನಡೆಸಲಾಗುತ್ತಿದೆ. ಇದು ಯಾವುದೇ ರಾಜಕೀಯ ಅಧಿಕಾರ,ಚುನಾವಣೆಗೋಸ್ಕರವಲ್ಲ. ರಾಜ್ಯ ಮತ್ತು ದೇಶಕ್ಕೆ ಅನುಕೂಲವಾಗುವಂತಹ ಹೋರಾಟ. ಪಾದಯಾತ್ರೆಯಲ್ಲಿ ಭಾಗವಹಿಸುವವರು ನೋಂದಣಿ ಮಾಡಿಸಿದರೆ ಅಗತ್ಯ ಊಟ, ವಸತಿ ವ್ಯವಸ್ಥೆ ಪ್ರಮಾಣ ಪತ್ರ ನೀಡಲಾಗುವುದು.

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ.

ಮೇಕೆದಾಟು ಜಾರಿಗೊಳ್ಳದಿದ್ದರೆ ರಾಜಧಾನಿಯಲ್ಲಿ ನೀರಿಗೆ ಸಮಸ್ಯೆ

ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಅವರೇ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದಾರೆ, ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹಸಿರು ಪೀಠದ ಒಪ್ಪಿಗೆ, ಅಗತ್ಯ ಅನುದಾನವನ್ನು ಅವರೇ ಒದಗಿಸಬೇಕು. ಈ ದಿಸೆಯಲ್ಲಿ ರಾಜ್ಯದ 26 ಸಂಸದರು ಒತ್ತಡ ಹಾಕಬೇಕು.

ಕಾವೇರಿ 5ನೇ ಹಂತದ ಯೋಜನೆಯಡಿ ಬೆಂಗಳೂರಿಗೆ ನೀರೊದಗಿಸುತ್ತಿದ್ದು, ಮೇಕೆದಾಟು ಯೋಜನೆ ಜಾರಿಯಾಗದಿದ್ದರೆ ರಾಜಧಾನಿಯಲ್ಲಿ ಮುಂದೆ ನೀರಿಗೆ ಹಾಹಾಕಾರ ಉದ್ಬವವಾಗಲಿದೆ. ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಮಾಡಿದ್ದರಿಂದಲೇ ಉತ್ತರ ಕರ್ನಾಟಕದಲ್ಲೂ ನೀರಾವರಿ ಯೋಜನೆಗೆ 58 ಸಾವಿರ ಕೋಟಿ ಹಣ ಕೊಡಲು ಸಾಧ್ಯವಾಯಿತು.

-ಡಾ.ಜಿ.ಪರಮೇಶ್ವರ ಮಾಜಿ ಡಿಸಿಎಂ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link