ಬೆಂಗಳೂರು:
ಬಹುಕೋಟಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ (ಎಂವಿಎಸ್‌ಟಿಡಿಸಿ) ಹಗರಣದಲ್ಲಿ ಸಚಿವರೊಬ್ಬರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾದಲ್ಲಿ ಅವ್ಯವಹಾರ ವಿಚಾರದ ಅಸ್ತ್ರ ಪ್ರಯೋಗಿಸಲು ಮುಗಿಬೀಳಲು ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ 14 ನಿವೇಶನಗಳನ್ನು ಮುಡಾ ಮಂಜೂರು ಮಾಡಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ವಿಚಾರ ಹಿಡಿದು ಸಿದ್ದರಾಮಯ್ಯ ಅವರನ್ನು ಗುರಿ ಮಾಡಲು ಬಿಜೆಪಿ ಚಿಂತನೆ ನಡೆಸಿದೆ.
ಮಾಜಿ ಸಚಿವ ಬಿ ನಾಗೇಂದ್ರ ಮತ್ತು ಎಸ್‌ಟಿ ನಿಗಮದ ಅಧ್ಯಕ್ಷ ಹಾಗೂ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ವಿರುದ್ಧದ ಬಿಜೆಪಿಯ ಆರೋಪಗಳನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸಿದೆ.
ಸಿಎಂ, ಉಪ ಮುಖ್ಯಮಂತ್ರಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕರು ನಾಗೇಂದ್ರ ಮತ್ತು ದದ್ದಲ್ ಅವರನ್ನು ಸಮರ್ಥಿಸಿಕೊಂಡಿದ್ದು, ಪ್ರತಿಪಕ್ಷಗಳು ತನಿಖಾ ಸಂಸ್ಥೆ ತನಿಖೆ ಪೂರ್ಣಗೊಳಿಸಿ, ಚಾರ್ಜ್‌ಶೀಟ್ ಸಲ್ಲಿಸುವವರೆಗೆ ಕಾಯಬೇಕಿದೆ ಎಂದು ಹೇಳಿದ್ದಾರೆ.
ನಾಗೇಂದ್ರ ಮತ್ತು ದದ್ದಾಲ್ ವಿರುದ್ಧ ಸಿಬಿಐ ಮತ್ತು ಇಡಿ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದು ವಿವೇಕಯುತವಲ್ಲ ಎನ್ನಲಾಗುತ್ತಿದ್ದು, ಹೀಗಾಗಿ ಮುಡಾ ಹಗರಣ ಹಿಡಿದು ಮುಖ್ಯಮಂತ್ರಿಗಳನ್ನು ಗುರಿ ಮಾಡಲು ಬಿಜೆಪಿ ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ, ಬಿಜೆಪಿಯ ಈ ಪ್ರಯತ್ನವನ್ನೂ ಎದುರಿಸಲು ಕಾಂಗ್ರೆಸ್ ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೂ ಕೆಲವು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಡಾದಿಂದ ನಿವೇಶನ ಪಡೆದಿದ್ದರು ಎನ್ನಲಾಗಿದ್ದು, ಕಾಂಗ್ರೆಸ್ ನಾಯಕರೂ ಕೂಡ ಈ ವಿಷಯವನ್ನು ಪ್ರಸ್ತಾಪಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಈ ಹಿಂದೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಕುಟುಂಬಕ್ಕೆ 48 ನಿವೇಶನಗಳನ್ನು ಹಂಚಿಕೆ ಮಾಡಿರುವುದಾಗಿ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು 2011ರಲ್ಲಿ ವಿಧಾನ ಪರಿಷತ್ ಸಭಾಪತಿಗೆ ದಾಖಲೆಗಳನ್ನು ಸಲ್ಲಿಸಿದ್ದರು.
ಮುಡಾ ಹಗರಣಕ್ಕೆ ಯಡಿಯೂರಪ್ಪ ಮಾಡಿದ್ದ ಆರೋಪಗಳು ವಿಧಾನ ಪರಿಷತ್ತಿನ ನಡಾವಳಿಯಲ್ಲಿ ದಾಖಲಾಗಿವೆ. ಎಚ್.ಡಿ. ಕುಮಾರಸ್ವಾಮಿಗೆ 300×200 ಚ.ಅಡಿ ಅಳತೆಯ (ಸುಮಾರು 60 ಸಾವಿರ ಚದರ ಅಡಿ) ನಿವೇಶನ ಸಂಖ್ಯೆ 17 (ಬಿ), ಅವರ ಕುಟುಂಬದ ಸವಿತಾ ಕೋಂ ಬೀರೇಗೌಡ ಎಂಬುವರಿಗೆ 130×110 ಅಡಿ (ಸುಮಾರು 14,300 ಅಡಿ) ನಿವೇಶನ ಅಕ್ರಮವಾಗಿ ಹಂಚಿಕೆಯ ಕುರಿತು ಯಡಿಯೂರಪ್ಪ ಆರೋಪಿಸಿದ್ದರು. ಯಡಿಯೂರಪ್ಪನವರು ಮಾಡಿದ್ದ ಈ ಆರೋಪಗಳ ಮೇಲೆ ತನಿಖೆಗೆ ಒತ್ತಾಯಿಸುವ ತಾಕತ್ತು ಬಿಜೆಪಿ ನಾಯಕರಿಗೆ ಇದೆಯೇ. ಯಡಿಯೂರಪ್ಪನವರು ದಾಖಲೆಗಳನ್ನು ಸಭಾಪತಿಗೆ ಮಂಡಿಸಿದರೂ ಬಿಜೆಪಿ ಯಾವ ಕಾರಣಕ್ಕೆ ಮೌನವಾಯಿತು ಎಂದು ಪ್ರಶ್ನಿಸಿದ್ದರು.
ಮುಡಾ ಹಗರಣದಲ್ಲಿ ಯಾವ, ಯಾವ ಬಿಜೆಪಿ ನಾಯಕರು ಎಷ್ಟು ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮೈಸೂರಿನ ಮುಡಾದಲ್ಲಿ ಹೆಚ್ಚು ಹಗರಣಗಳು ನಡೆದಿವೆ’ ಎಂದು ಆರೋಪಿಸಿದ್ದರು.