MUDA ಹಗರಣ: ನ್ಯಾಯಾಲಯಕ್ಕಿಂದು ಲೋಕಾಯುಕ್ತ ತನಿಖಾ ವರದಿ ಸಲ್ಲಿಕ್ಕೆ

ಮೈಸೂರು:

   ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮುಡಾ ಹಗರಣ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಇತರರ ವಿರುದ್ಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಶನಿವಾರ ನ್ಯಾಯಾಲಯಕ್ಕ ವರದಿ ಸಲ್ಲಿಸಲಿದ್ದಾರೆಂದು ತಿಳಿದಿಬಂದಿದೆ.

  ಆದರೆ, ಇದು ಅಂತಿಮ ವರದಿಯಲ್ಲ, ಈವರೆಗಿನ ತನಿಖಾ ಪ್ರಗತಿ ವರದಿಯಷ್ಟೇ. ಇನ್ನೂ ವರದಿಗೆ ಮತ್ತಷ್ಟು ಕಾಲಾವಕಾಶ ಕೋರಲು ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ.

  ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ತನಿಖೆಗೆ ಮತ್ತಷ್ಟು ಕಾಲಾವಕಾಶ ಕೇಳಲು ಮುಂದಾಗಿದ್ದಾರೆಂದು ತಿಳಿದುಬದಿದೆ.

   ಹಗರಣ ಸಂಬಂಧ ವರದಿ ಸಲ್ಲಿಸಲು ನ್ಯಾಯಾಲಯ ಜ.27ರ ಗಡುವು ನೀಡಿದ್ದು, ಜನವರಿ 27ಕ್ಕೆ ಒಂದು ದಿನ ಮುಂಚಿತವಾಗ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದರಂತೆ ಜ.26 ಭಾನುವಾರವಿದ್ದು, ಲೋಕಾಯಕ್ತ ಅಧಿಕಾರಿಗಳು ಜ.25ರಂದೇ ಅಂದರೆ ಇಂದೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದು. ಜ.27ರಂದು ವಿಚಾರಣೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

  ಮೂಲಗಳ ಪ್ರಕಾರ ಈ ವರದಿಯನ್ನು ಲೋಕಾಯುಕ್ತ ಪೊಲೀಸರ ನೇತೃತ್ವದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಎಡಿಜಿಪಿ ಮನೀಶ್ ಖಾರ್ಬಿಕರ್ ಮತ್ತು ಐಜಿಪಿ ಎ ಸುಬ್ರಹ್ಮಣ್ಯೇಶ್ವರ ರಾವ್ ಅವರು ಶುಕ್ರವಾರ ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು.

  ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಕೊಟ್ಟಿದ್ದಾರೆ ಇದು ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಬಾಮೈದ ಜಾಗ ಕೊಟ್ಟಿದ್ದ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಆದರೂ ಸಿಎಂ ಪತ್ನಿಗೆ ವಿಜಯನಗರದಲ್ಲೇ ಏಕೆ ಸೈಟ್ ಕೊಟ್ಟರು ಎಂಬ ಪ್ರಶ್ನೆ ಮೂಡಿದೆ. ಇದೇ ಪ್ರಶ್ನೆ ಈಗ ಮುಡಾದ ನಡೆ ಮೇಲೆ ಅನುಮಾನ ಬರುವಂತೆ ಮಾಡಿದೆ.

  ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರೋ 3ಎಕರೆ 16 ಗುಂಟೆ ಜಾಗವನ್ನ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ, ಪಾರ್ವತಿಯವರಿಗೆ ದಾನವಾಗಿ ನೀಡಿದ್ದರು. ಈ ಜಾಗವನ್ನು ಅಭಿವೃದ್ಧಿಗಾಗಿ ಪ್ರಾಧಿಕಾರ, ಕಾನೂನು ಪ್ರಕಾರವೇ ವಶಪಡಿಸಿಕೊಂಡಿತ್ತು. 1998ರಲ್ಲಿ ನೋಟಿಫೈ ಮಾಡಿತ್ತು. ಇದೇ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿ ಮಾಡಿದೆ.

   ವಿಷಯ ಏನೆಂದರೆ, ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಹೀಗಾಗಿ ಬದಲಿ ಭೂಮಿ ನೀಡುವಂತೆ 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರು. 2017ರಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಪಡಿಸದ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಇದಕ್ಕೆ ಒಪ್ಪದ ಸಿಎಂ ಪತ್ನಿ ಪಾರ್ವತಿ 2021ರಲ್ಲಿ ಮತ್ತೊಂದು ಪತ್ರ ಬರೆದಿದ್ದರು. 50:50ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಸಿಎಂ ಪತ್ನಿ ಕೋರಿಕೆಯಂತೆ 2021ರಲ್ಲಿ 50:50ಅನುಪಾತದಲ್ಲಿ ಭೂಮಿ ನೀಡಲಾಗಿದೆ ಎಂಬುದು ಆರೋಪ.

   ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38ಸಾವಿರದ 284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ, 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತರ ಆರೋಪವಾಗಿದೆ.

   ಭೂಮಿ ವಶಪಡಿಸಿಕೊಂಡ ಜಾಗದಲ್ಲಿ, ಅಥವಾ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು, ವಿಜಯನಗರದಲ್ಲಿ ಭೂಮಿ ಕೊಡಲಾಗಿದೆ. 50:50 ಅನುಪಾತ ನಿಯಮವನ್ನ ದುರುಪಯೋಗಪಡಿಸಿಕೊಂಡು, 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50 ಅನುಪಾತ ಬಳಸಿದ್ದೇಕೆ ಎಂದು ದೂರುದಾರರ ಪ್ರಶ್ನಿಸಿದ್ದಾರೆ.

  ಕೆಸರೆಯಲ್ಲಿ ಕಡಿಮೆ ಮೌಲ್ಯದ ಜಾಗ ಸ್ವಾಧೀನ ಮಾಡಿ, ವಿಜಯನಗರದಲ್ಲಿ ಹೆಚ್ಚಿನ ಮೌಲ್ಯದ ಬದಲಿ ಭೂಮಿ ನೀಡಲಾಗಿದೆ. ಅಂದರೆ, ದೇವನೂರು ಬಡಾವಣೆಯಲ್ಲಿ ಚದರ ಅಡಿಗೆ 2500 ರೂಪಾಯಿಯಿಂದ 3000 ರೂಪಾಯಿವರೆಗ ದರ ಇದೆ. ಆದರೆ, ವಿಜಯನಗರದಲ್ಲಿ 7ರಿಂದ 8ಸಾವಿರ ರೂಪಾಯಿ ಇದೆ. ಹೀಗಾಗಿ ಸಿಎಂ ಮತ್ತು ಸಿಎಂ ಪತ್ನಿಗೆ ಆರ್ಥಿಕ ಲಾಭ ಮಾಡಿಕೊಡಲು ಮುಡಾ ಅಧಿಕಾರಿಗಳು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

   ಸಿಎಂ ಪತ್ನಿಗೆ 1998ರ ಜಾಗಕ್ಕೆ 2021ರಲ್ಲಿ ಪರಿಹಾರ ಸಿಕ್ಕಿರುವುದು, ಬೇರೆ ಕಡೆ ಭೂಮಿ ಕೊಟ್ಟಿರುವುದು, 50-50 ಅನುಪಾತ ದುರ್ಬಳಕೆ ಮಾಡಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮುಡಾದ 50:50 ಅನುಪಾತ ಹಂಚಿಕೆ ವಿಚಾರ ಕೋಟ್ಯಂತರ ರೂಪಾಯಿ ಹಗರಣ ಬಡಿದಾಟಕ್ಕೆ ಕಾರಣವಾಗಿದೆ

Recent Articles

spot_img

Related Stories

Share via
Copy link