ಮುಡಾ ಹಗರಣ : ಇಂದು ಸಿಎಂ ಅರ್ಜಿ ವಿಚಾರಣೆ : ಎಲ್ಲರ ಚಿತ್ತ ಕೋರ್ಟ್‌ ನತ್ತ…?

ಬೆಂಗಳೂರು:

    ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪದಡಿ ಕ್ಯಾಬಿನೆಟ್ ಸಲಹೆ ಧಿಕ್ಕರಿಸಿ ತನ್ನ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಮತ್ತೊಂದೆಡೆ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಮುಂದುವರಿಕೆ ಕುರಿತಂತೆ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಲಿದೆ.

   ಆಡಳಿತ ಪಕ್ಷ ಮತ್ತು ವಿಪಕ್ಷಗಳು ದೃಷ್ಟಿ ನ್ಯಾಯಾಲಯದತ್ತ ನೆಟ್ಟಿದ್ದು, ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ. ಹೈಕೋರ್ಟ್ ಇಂದೇ ವಿಚಾರಣೆ ಪೂರ್ಣಗೊಳಿಸಿದರೆ ಆದೇಶವನ್ನು ಕಾಯ್ದಿರಿಸುವ ಸಾಧ್ಯತೆಗಳು ಹೆಚ್ಚಿವೆ. ಒಂದು ವೇಳೆ ವಿರುದ್ಧ ಆದೇಶ ಬಂದರೆ ಮೇಲ್ಮನವಿ ಸಲ್ಲಿಸಲು ವಾದಿ ಸಿದ್ದರಾಮಯ್ಯ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸಿದ್ಧತೆ ನಡೆಸಿದ್ದಾರೆ.

   ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದು ಲೋಕಾಯುಕ್ತ ಪೊಲೀಸರಿಗೆ ವಹಿಸಲು ಸಚಿವ ಸಂಪುಟ ನಿರ್ಧರಿಸಿತ್ತು. ಈ ನಿರ್ಧಾರವನ್ನು ಸಿಬಿಐ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.

   ನ್ಯಾಯಮೂರ್ತಿ ಕೆ.ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ.ಅಡಿಗರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇಂದು ಸಂಜೆ 4.30ಕ್ಕೆ ತೀರ್ಪು ಪ್ರಕಟಿಸಲಿದೆ. ಸಿಬಿಐ ತನಿಖೆ ಮುಂದುವರಿಸುವಂತೆ ಹೈಕೋರ್ಟ್ ಆದೇಶಿಸಿದರೆ ಡಿಕೆ ಶಿವಕುಮಾರ್ ಗೆ ಹಿನ್ನಡೆ ಯಾಗಲಿದೆ. ಲೋಕಾಯುಕ್ತ ಪೊಲೀಸರಿಗೆ ತನಿಖೆ ವಹಿಸಿದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದರೆ ನಿರಾಳರಾಗಲಿದ್ದಾರೆ.

Recent Articles

spot_img

Related Stories

Share via
Copy link
Powered by Social Snap