ಒಳಜಗಳದಿಂದ ಕಾವೇರಿ ಹೋರಾಟಕ್ಕೆ ಹಿನ್ನಡೆ : ಮುಖ್ಯಮಂತ್ರಿ ಚಂದ್ರು

ಬೆಂಗಳೂರು: 

     ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಒಳಜಗಳದಿಂದ ಕಾವೇರಿ ಹೋರಾಟಕ್ಕೆ ಹಿನ್ನಡೆಯಾಗಿದೆ. ಇಬ್ಬರಿಗೂ ರಾಜ್ಯದ ಜನರ ಹಿತ ಕಾಪಾಡುವುದು ಬೇಕಿಲ್ಲ, ಅಧಿಕಾರ ಉಳಿಸಿಕೊಳ್ಳುವುದಷ್ಟೆ ಮುಖ್ಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು  ಆರೋಪಿಸಿದರು. 

    ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಖಾಲಿ ಬಿಂದಿಗೆ, ಖಾಲಿ ಬಕೆಟ್ ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

     ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಕಾವೇರಿ ನೀರಿನ ಸಮಸ್ಯೆ ಹಲವು ದಶಕಗಳಿಂದ ಇದೆ. ಈ ಸಮಸ್ಯೆಗೆ ಸರ್ಕಾರದ ಇಚ್ಚಾಶಕ್ತಿ ಕೊರತೆಯೇ ಕಾರಣವಾಗಿದೆ. ರಾಜ್ಯಕ್ಕೆ ನೀರಿಲ್ಲದಿರುವಾಗ ತಮಿಳುನಾಡಿಗೆ ಬಿಡಲು ಹೇಗೆ ಸಾಧ್ಯ?. ತಕ್ಷಣವೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಲಿ. ಮುಂದೇ ಏನೆ ಬಂದರೂ ಎದುರಿಸಲಿ, ನಾವೂ ಜೊತೆಗೆ ಇರುತ್ತೇವೆ ಎಂದರು. 

    ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಡಿಕೆ ಶಿವಕುಮಾರ್ ಅವರಿಂದು ಮಲಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಒಪ್ಪಂದ ಮಾಡಿಕೊಂಡಿದ್ದು, ಮತಬ್ಯಾಂಕ್‌ಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕಾಗಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಎಎಪಿ ಬೆಂಗಳೂರು ಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
    ತಮಿಳುನಾಡು ಸರ್ಕಾರದ ರಾಜಕಾರಣಿಗಳು ರೈತರಿಗೆ ನೀರು ಬಿಡಿಸಿಕೊಂಡಿದ್ದಾರೆ. ಆದರೆ, ನಮ್ಮ ರಾಜ್ಯದ ರೈತರಿಗೆ ಇರಲಿ, ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ತಮಿಳುನಾಡಿನ ರಾಜಕಾರಣಿಗಳನ್ನು ನೋಡಿ ಕಲಿಯಬೇಕು. ಕಾಂಗ್ರೆಸ್‌ನ ಭ್ರಷ್ಟ ರಾಜಕಾರಣಕ್ಕೆ ರಾಜ್ಯದ ಜನರನ್ನು ದಾಳವನ್ನಾಗಿ ಬಳಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಖಾಲಿ ಬಕೆಟ್, ಖಾಲಿ ಬಿಂದಿಗೆ ಸಿಗಲಿದೆ ಎಂದು ಹೇಳಿದರು.
    ಆಮ್‌ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮೋಹನ್ ದಾಸರಿ ಮಾತನಾಡಿ, ಚುನಾವಣೆಗೆ ಮುನ್ನ ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಬೇಕು ಎಂದು ಹೋರಾಟ ಮಾಡಿದ ಡಿಕೆ ಶಿವಕುಮಾರ್ ಇಂದು ನೀರಾವರಿ ಸಚಿವರಾಗಿದ್ದಾರೆ. ಬೆಂಗಳೂರು ಉಸ್ತುವಾರಿ ಕೂಡ ಅವರದ್ದೇ ಆಗಿದೆ. ಆದರೆ, ನಮಗೇ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಹೇಳಿದರು.
    ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಕೂಡ ರಾಜಕೀಯ ಕಾರಣಗಳಿಗಾಗಿ ತಮಿಳುನಾಡಿಗೆ ನೀರು ಹರಿಸುತ್ತಿವೆ. ರಾಜ್ಯಕ್ಕೆ ಹೆಚ್ಚಿನ ನಷ್ಟವಾಗುತ್ತಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರಂತಹವರು ಕೂಡ ಈ ವಿಚಾರದಲ್ಲಿ ಮಾತನಾಡುತ್ತಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ