ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 31 ಗ್ರಂಥಗಳ ಅನಾವರಣ

ಏ.19-20ರಂದು 2 ದಿನಗಳ ಕಾಲ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಾವೇಶ

ತುಮಕೂರು:

    ಕುರುಬರ ಸಾಂಸ್ಕೃತಿಕ ಪರಿಷತ್ತು(ಟ್ರಸ್ಟ್) ಬೆಂಗಳೂರು, ಶ್ರೀದೇವಿ ಶಿಕ್ಷಣ ಸಂಸ್ಥೆ ತುಮಕೂರು ಹಾಗೂ ಪ್ರಜಾಪ್ರಗತಿ-ಪ್ರಗತಿ ಟಿವಿ ಸಮೂಹದ ಸಹಯೋಗದಲ್ಲಿ ಸಾಹಿತಿಗಳ ಸಾಂಸ್ಕೃತಿಕ ಸಮಾವೇಶ ಹಾಗೂ ಕುರುಬರ ಸಂಸ್ಕೃತಿ ದರ್ಶನ ಜನಪ್ರಿಯ ಮಾಲೆಯ ೩೧ ಗ್ರಂಥಗಳ ಅನಾವರಣ ಕಾರ್ಯಕ್ರಮವನ್ನು ನಗರದ ಶಿರಾ ರಸ್ತೆ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಏ.೧೯ ಹಾಗೂ ೨೦ರಂದು ೨ ದಿನಗಳ ಕಾಲ ಏರ್ಪಡಿಸಲಾಗಿದೆ ಎಂದು ಶ್ರೀದೇವಿ ಶಿಕ್ಷಣ ಸಮೂಹದ ಅಧ್ಯಕ್ಷರು, ವಿಧಾನಪರಿಷತ್ ಮಾಜಿ ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.

   ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಇದೊಂದು ಅನನ್ಯ. ಅಪೂರ್ವಕಾರ್ಯಕ್ರಮ. ಕುರುಬರು, ಹಾಲುಮತ ಸಮುದಾಯದ ಸಂಸ್ಕೃತಿ, ಚರಿತ್ರೆ, ಕುಲದೈವ, ಸಾಹಿತ್ಯ, ಉತ್ಸವಕ್ಕೆ ಸಂಬಂಧಿಸಿದಂತೆ ೩೧ ಸಂಗ್ರಹಯೋಗ್ಯ ಕೃತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸುತ್ತಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಪಾಲ್ಗೊಳ್ಳುವರು. ರಾಜ್ಯದ ವಿವಿಧೆಡೆಯ ಸಾಹಿತಿಗಳು, ವಿದ್ವಾಂಸರು, ಸಂಶೋಧಕರು ಈ ಗ್ರಂಥ ಲೋಕಾರ್ಪಣೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.

ಸಮುದಾಯ ಕುರಿತು ವಿಚಾರಗೋಷ್ಠಿ:

   ಮಧ್ಯಾಹ್ನ ೨ ರಿಂದ ವಿಷಯ ಮಂಡನೆ, ಸಂವಾದ ಜರುಗಲಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಕುರುಬರ ಸಾಂಸ್ಕೃತಿಕ ಪರಿಷತ್ತಿನ ಪ್ರಕಟಣೆಗಳ ಕುರಿತಾಗಿ, ಹಿರಿಯ ಸಾಹಿತಿ ಪ್ರೊ.ಕೃಷ್ಣಬಾಯಿ ಹಾಗಲವಾಡಿ ಅವರು ಸಮುದಾಯ ಮತ್ತು ಪರಂಪರೆ ಕುರಿತು, ಸಹಪ್ರಾಧ್ಯಾಪಕ ಡಾ.ಗವಿಸಿದ್ದಪ್ಪ ಪಾಟೀಲ್ ಸಮುದಾಯ ಮತ್ತು ಸಾಹಿತ್ಯ ಕುರಿತು, ರಂಗಕರ್ಮಿ ಕೆಎಸ್‌ಡಿಎಲ್ ಚಂದ್ರು ಸಮುದಾಯ ಮತ್ತು ರಂಗಭೂಮಿ ಕುರಿತು ವಿಷಯ ಮಂಡಿಸುವರು. ಕಾರ್ಯಕ್ರಮದ ಆರಂಭದಲ್ಲಿ ಬೆಳಿಗ್ಗೆ ೧೦ರಿಂದ ಪಂ.ಖಾಸಿಂ ಮಲ್ಲಿಗೆಮಡು ಮತ್ತು ತಂಡದವರಿಂದ ಕನಕ ಕಾವ್ಯ ಗಾಯನ ಸುಧೆ ನೆರವೇರಲಿದೆ ಎಂದರು.

೨ನೇ ದಿನವೂ ವಿಷಯಮಂಡನೆ:

   ೨ನೇ ದಿನ ೨೦ರಂದು ಭಾನುವಾರವೂ ವಿಷಯ ಮಂಡನೆ, ಸಂವಾದ ಮುಂದುವರಿಯಲಿದ್ದು, ಸಮುದಾಯದ ವೈದ್ಯಕೀಯ ಶಿಕ್ಷಣದ ಕುರಿತಾಗಿ ಡಾ.ವಿಜಯಲಕ್ಷ್ಮೀ ಪರಮೇಶ್ವರ, ಸಮುದಾಯ ಮತ್ತು ತಾಂತ್ರಿಕ ಶಿಕ್ಷಣ ಕುರಿತಾಗಿ ಡಾ.ಎಚ್.ಎಂ.ಸೋಮಶೇಖರ್, ನಮ್ಮ ಸಮುದಾಯದ ಮಾಧ್ಯಮ ಸಂಸ್ಥೆಗಳ ಕುರಿತಾಗಿ ಎಸ್.ನಾಗಣ್ಣ, ಸಮುದಾಯ ಮತ್ತು ಸಹಕಾರ ಕ್ಷೇತ್ರ ಕುರಿತಾಗಿ ಡಾ.ಮಂಜುನಾಥ್ ಎಂ.ಬೊಮ್ಮನಕಟ್ಟಿ, ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳು ಹಾಗೂ ಸೌಲಭ್ಯ ಕುರಿತಾಗಿ ಡಾ.ಸಂತೋಷ್ ಎ.ನವಲೂರು, ಸಮುದಾಯ ಮತ್ತು ಸಂಘ ಸಂಸ್ಥೆಗಳ ವಿಷಯವಾಗಿ ಡಾ.ಡಿ.ಪುರುಷೋತ್ತಮ, ಸಮುದಾಯ ಮತ್ತು ಶಿಕ್ಷಣ ಕುರಿತಾಗಿ ಡಾ.ಪರಶುರಾಮ ಹಾಗೂ ನ್ಯಾಯಾಂಗ ಕ್ಷೇತ್ರಕ್ಕೆ ಸಮುದಾಯದ ಕೊಡುಗೆ ಕುರಿತಾಗಿ ಎಚ್.ಕಾಂತರಾಜ್ ವಿಷಯ ಮಂಡಿಸಿ ಸಂವಾದಿಸುವರು.

ಭಾನುವಾರ ಸಮಾರೋಪ:

   ಸಂಜೆ ೪ಕ್ಕೆ ಸಮಾರೋಪ ನಡೆಯಲಿದ್ದು, ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ಸಮಾರೋಪ ಭಾಷಣ ಮಾಡಲಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಎಂಎಲ್ಸಿ , ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಹಾಗೂ ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರದ ಚಿಂತಕರಾದ ಡಾ.ಆರ್.ಸುನಂದಮ್ಮ, ಕಾ.ತ.ಚಿಕ್ಕಣ್ಣ, ಎಚ್.ಗೋಪಾಲಕೃಷ್ಣಸ್ವಾಮಿ, ಡಾ.ಲಕ್ಷ್ಮಿದೇವಿ, ಎಚ್.ಸಿ.ಲೋಕೇಶ್, ಡಾ.ಎಚ್.ಸಿ.ಶಿವಕುಮಾರ್, ಡಾ.ಮಂಜಪ್ಪ ಮಾಗೋದಿ, ಪಾತಣ್ಣ ದ್ವಾರನಕುಂಟೆ, ಬಿ.ಗಂಗಾಧರ್, ಡಾ.ಎಸ್.ಸಿದ್ದರಾಮಣ್ಣ, ಕೆ.ಆರ್.ವಚನ, ಬಿ.ಲಕ್ಷ್ಮಿ, ನಾಗರಾಜು ಅವರುಗಳು ಉಪಸ್ಥಿತರಿರುವರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಟಿ.ಎನ್.ಮಧುಕರ್, ಕಾಳಿದಾಸ ವಿದ್ಯಾವರ್ದಕ ಸಂಘದ ಅಧ್ಯಕ್ಷ ಮೈಲಪ್ಪ, ಕವಿರತ್ನ ಕಾಳಿದಾಸ ಸಹಕಾರ ಸಂಘದ ಅಧ್ಯಕ್ಷ ಧರ್ಮರಾಜ್, ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿನರಸಿಂಹರಾಜು, ಮಲ್ಲಿಕಾರ್ಜುನ್ ಹೆಬ್ಬಾಕ, ಪುಟ್ಟರಾಜ್, ಬಸವರಾಜ್, ಟಿ.ಇ.ರಘುರಾಮ್ ಇತರರಿದ್ದರು. 

    ಕುರುಬರ ಸಾಂಸ್ಕೃತಿಕ ಪರಿಷತ್ ಬಹಳ ವರ್ಷಗಳಿಂದ ಸಮುದಾಯದ ಚರಿತ್ರೆ, ಸಾಂಸ್ಕೃತಿಕ ಇತಿಹಾಸಗಳ ಬಗ್ಗೆ ಗ್ರಂಥ ಪ್ರಕಟಣೆ, ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳ್ಳುತ್ತಿರುವ ೩೧ ಗ್ರಂಥಗಳು ಹಾಲುಮತ, ಕುರುಬ ಸಮುದಾಯದ ಆಚರಣೆ, ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಆಳವಾದ ಅಧ್ಯಯನ ಜರುಗಿದ ಆಕರ ಗ್ರಂಥಗೆಳೆನಿಸಿವೆ.-ಎಸ್.ನಾಗಣ್ಣ ಸಂಪಾದಕರು ಪ್ರಜಾಪ್ರಗತಿ.