ಬೆಂಗಳೂರು
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಕ್ಷೇತ್ರದ ಕೆಲಸ ಮಾಡಲು ಬಹಳ ಕಷ್ಟವಾಗುತ್ತಿದೆ, ನನ್ನ ಕ್ಷೇತ್ರಕ್ಕೆ ಬರಬೇಕಾದ ಅನುದಾನವನ್ನು ಕಡಿತ ಮಾಡಿ ಬೇರೆ ಕ್ಷೇತ್ರಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನ ಸೌಧ ಮುಂದೆ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುತ್ತಿದ್ದ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ನಂತರ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕಂಬಳದ ಕರೆ ಪೂಜೆ ಕಾರ್ಯಕ್ರಮ ಬಳಿ ಬಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಕಾಲಿಗೆ ನಮಸ್ಕರಿಸಿ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಚುನಾವಣಾ ಫಲಿತಾಂಶ ಚುನಾವಣಾ ಫಲಿತಾಂಶ ಬಂದ ದಿನದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಲು ಕಷ್ಟ ಆಗುತ್ತಿದೆ. ಪೊಲೀಸ್ ದೌರ್ಜನ್ಯ, ಕಾಂಗ್ರೆಸ್ ಬೆಂಬಲಿಗರಿಂದ ಸಾರ್ವಜನಿಕರಿಗೆ ಕಿರುಕುಳ ಹೆಚ್ಚಾಗುತ್ತಿದೆ. ನಾನು ಒಂದು ವಾರ್ಡ್ ತನಿಖೆಗೆ ಪತ್ರ ಬರೆದರೆ ಇಡೀ ಕ್ಷೇತ್ರದ ಹಣ ತಡೆದಿದ್ದಾರೆ. ಪರಾಜಿತ ಅಭ್ಯರ್ಥಿ ಮತ್ತು ಅವರ ತಂದೆ ನೇರವಾಗಿ ಅಧಿಕಾರಿಗಳ ಸಭೆ, ದೂರವಾಣಿಯಲ್ಲಿ ಮಾಡುತ್ತಿದ್ದಾರೆ. ಡಿ.ಕೆ. ಸುರೇಶ್ ಅವರು ಸಂಸದರಾಗಿರುವ ಕ್ಷೇತ್ರಕ್ಕೆ ಹಣ ಕೊಡಿಸುವುದು ಅವರ ಕರ್ತವ್ಯ. ಅನುದಾನ ಬೇರೆಡೆ ವರ್ಗಾವಣೆ ಮಾಡಿದರೂ ಒಂದೇ ಒಂದು ಮಾತು ಮಾತಾಡಿಲ್ಲ. ಎಲ್ಲಾ ಶಾಸಕರನ್ನು ನೋಡುವ ರೀತಿಯಲ್ಲೇ ನನ್ನನ್ನೂ ನೋಡಿ ಎಂದು ಮನವಿ ಮಾಡಿದರು.
ಮುಂದಿನ ತಿಂಗಳು ನವೆಂಬರ್ ನಲ್ಲಿ ತುಳುಕೂಟಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದ್ದು, ಅದಕ್ಕೆ ಪೂರ್ವ ಸಿದ್ಧತೆ ಕಾರ್ಯಕ್ರಮ ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು,. ಅಲ್ಲಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಡಾ.ಸಿಎನ್ ಅಶ್ವತ್ ನಾರಾಯಣ್, ಡಿವಿ ಸದಾನಂದ ಗೌಡ ಸೇರಿದಂತೆ ಪಕ್ಷಾತೀತವಾಗಿ ನಾಯಕರು ಭಾಗಿಯಾಗಿದ್ದರು. ಮುಂಬರುವ ಬೆಂಗಳೂರು ಕಂಬಳದ ಬಗ್ಗೆ ನಡೆಯುತ್ತಿದ್ದ ಕಂಬಳದ ಕರೆ ಪೂಜೆಯಲ್ಲಿ ಎಲ್ಲವೂ ಸರಾಗವಾಗಿಯೇ ನಡೆಯುತ್ತಿದ್ದ ಆರ್ ಆರ್ ನಗರ ಶಾಸಕ ಮುನಿರತ್ನ ಪ್ರವೇಶಿಸಿ ಗೊಂದಲದ ವಾತಾವರಣ ಉಂಟಾಯಿತು.
ತನ್ನ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಂದು ಮೈಸೂರಿಗೆ ಹೋಗಲು ತಯಾರಾಗುತ್ತಿದ್ದ ಡಿಕೆ ಶಿವಕುಮಾರ್ ಬಳಿ ಬಂದ ಶಾಸಕ ಮುನಿರತ್ನ, ಡಿಕೆ ಶಿವಕುಮಾರ್ ಕಾಲಿಗೆ ಬಿದ್ದು ತನ್ನ ಆರ್ ಆರ್ ನಗರ ಕ್ಷೇತ್ರಕ್ಕೆ ಅನುದಾನ ನೀಡಿ ಎಂದು ಮನವಿ ಮಾಡಿ ಮನವಿ ಪತ್ರ ನೀಡಿದರು. ನಂತರ ಮುನಿರತ್ನ ಬೆನ್ನು ತಟ್ಟಿದ ಡಿಕೆ ಶಿವಕುಮಾರ್, ನಾನೀಗ ಮೈಸೂರಿಗೆ ಹೋಗುತ್ತಿದ್ದೇನೆ. ನಂತರ ನಿಮಗೆ ಸಮಯ ಕೊಡುತ್ತೇನೆ ಎಂದರು.
