ಬೆಂಗಳೂರು:
ಬಿಜೆಪಿ ಶಾಸಕ ಮುನಿರತ್ನ ಅವರು ತಮ್ಮ ಶತ್ರುಗಳಿಗೆ ಎಚ್‌ಐವಿ ಸೋಂಕು ತಗುಲಿಸಲು ಯತ್ನಿಸುತ್ತಿದ್ದರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಇವರ ರಾಜಕೀಯ ದ್ವೇಷಕ್ಕೆ ಬಳಸಿಕೊಂಡಿದ್ದಾರೆ, ಇದು ಅಸಹ್ಯದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಪ್ರಕರಣದ ತನಿಖೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಬೇಕು, ಯಾರನ್ನು ಯಾವ ಯಾವ ಸಮಯದಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದು ಜಗತ್ತಿಗೆ ತಿಳಿಯಬೇಕು, ಎಸ್‌ಐಟಿ ಅಥವಾ ಬೇರೆ ಸಂಸ್ಥೆಯಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಸಮರ್ಪಕ ತನಿಖೆಯಿಂದ ಮಾತ್ರವೇ ಬಿಜೆಪಿ ನಾಯಕರ ಬಣ್ಣ ಬಯಲಾಗಬೇಕಿದೆ. ಇಂತಹ ಗಂಭೀರ ಆರೋಪಗಳು ಕೇಳಿಬಂದಿದ್ದರೂ, ವಿಪಕ್ಷ ನಾಯಕ ಆರ್. ಅಶೋಕ್, ಸಿ.ಟಿ. ರವಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ಮುನಿರತ್ನ ಪರ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.
ಮುನಿರತ್ನ ಅವರು ಜೆಡಿಎಸ್ ಮತ್ತು ಬಿಜೆಪಿ ಬೆಂಬಲದೊಂದಿಗೆ ಒಕ್ಕಲಿಗರು, ದಲಿತರು ಮತ್ತು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮುನಿರತ್ನ ಒಕ್ಕಲಿಗ, ದಲಿತರು ಮತ್ತು ಮಹಿಳೆಯರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿದ್ದರೂ ಬಿಜೆಪಿ ರಾಜಕೀಯ ಬಣ್ಣ ಬಳಿಯುತ್ತಿರುವುದು ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದಲ್ಲದೆ, ಶಾಸಕನ ವಿರುದ್ಧ ಹೊಸ ಲೈಂಗಿಕ ದೌರ್ಜನ್ಯ ಪ್ರಕರಣವೂ ದಾಖಲಾಗಿದೆ. ಇದು ರಾಜಕೀಯ ದ್ವೇಷವೇ ಎಂಬುದನ್ನು ಪ್ರತಿಪಕ್ಷಗಳು ಸ್ಪಷ್ಟಪಡಿಸಲಿ ಹೇಳಿದರು.
ಸಿ.ಟಿ.ರವಿ, ಎಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ ಸೇರಿದಂತೆ ಮುನಿರತ್ನ ಅವರನ್ನು ಹಿಂದಿನಿಂದ ಬೆಂಬಲಿಸುತ್ತಿರುವವರು ಈ ಬಗ್ಗೆ ಹೇಳಿಕೆ ನೀಡಬೇಕು. ಶಾಸಕರ ವಿರುದ್ಧ ಒಕ್ಕಲಿಗ ಮತ್ತು ದಲಿತ ಸಮುದಾಯಗಳ ಧಾರ್ಮಿಕ ಮುಖಂಡರು ಪ್ರತಿಭಟನೆ ನಡೆಸಬೇಕು ಎಂದು ಒತ್ತಾಯಿಸಿದರು.
ಡಿನೋಟಿಫಿಕೇಷನ್ ಪ್ರಕರಣ ಕುರಿತು ಮಾತನಾಡಿ, ಗಂಗೇನಹಳ್ಳಿಯ 1.11 ಎಕರೆ ಜಮೀನು ಡಿನೋಟಿಫಿಕೇಷನ್ ಎಷ್ಟು ಹಳೆಯದಾದರೂ ತನಿಖೆಯಾಗಬೇಕು. ಕುಮಾರಸ್ವಾಮಿ ಅವರ ಅತ್ತೆ ಮೃತ ವ್ಯಕ್ತಿಯಿಂದ ಜಮೀನು ಖರೀದಿಸಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸದೆ ಇದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು