ಬೆಂಗಳೂರು
ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಅವರು ನೀಡಿದ ದೂರಿನ ಅನ್ವಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಒಳಸಂಚು ರೂಪಿಸಿ, ಹಲ್ಲೆ ಮತ್ತು ಕೊಲೆ ಮಾಡುವ ಉದ್ದೇಶದ ಭಾಗವಾಗಿ ಮೊಟ್ಟೆ ಎಸೆಯಲಾಗಿದೆ ಎಂದು ಮುನಿರತ್ನ ದೂರಿನಲ್ಲಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಮುನಿರತ್ನ ನೀಡಿದ ದೂರಿನಲ್ಲಿ ಸ್ಫೋಟಕ ಸಂಗತಿಗಳು ದಾಖಲಾಗಿವೆ. ಮುನಿರತ್ನ ನೀಡಿರುವ ದೂರಿನಲ್ಲಿ ಮಾಜಿ ಸಂಸದ ಡಿಕೆ ಸುರೇಶ್, ಕುಸುಮಾ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಸೇರಿದಂತೆ ನೂರರಿಂದ 150 ಜನರ ಹೆಸರಿದೆ.
ಡಿಸೆಂಬರ್ 5, 2024 ರಂದು ವಕೀಲರ ರೂಪದಲ್ಲಿ ಬಂದ ಇಬ್ಬರು, ‘ನಿನಗೆ ಈಗಲೂ ಕಾಲ ಮಿಂಚಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು. ಇಲ್ಲದೆ ಇದ್ದರೆ ನಿನ್ನ ಮೇಲೆ ಪೋಕ್ಸೋ ಕೇಸ್ ಹಾಕಿ ಮತ್ತೆ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ನಮ್ಮ ಅಣ್ಣ, ಡಿಕೆಸುರೇಶ್ ಸಂತೋಷವಾಗಿರಬೇಕು. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರನ್ನ ಸೋಲಿಸಿದ್ದಕ್ಕಾಗಿ ಅವರು ನೊಂದಿದ್ದಾರೆ. ಅವರು ಸಂತೋಷವಾಗಿರಬೇಕಾದರೆ ಕುಸುಮಾ ಅವರು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶಾಸಕರಾಗಬೇಕು. ಮುಂದಿನ ದಿನಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಳರ್ ಅವರ ಹಾಗೆ ಸಚಿವರಾಗಿ ನೋಡಬೇಕು. ಹೀಗಾಗಿ ನೀನು ರಾಜೀನಾಮೆ ಕೊಟ್ಟರೆ ಜೀವ ಉಳಿಯುತ್ತದೆ ಇಲ್ಲದಿದ್ದರೆ 100-150 ಜನ ಸೇರಿಸಿ ಒಟ್ಟಿಗೆ ಬಂದು ನೀನು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಆ್ಯಸಿಡ್ ಕೋಳಿ ಮೊಟ್ಟೆ ಹಾಕಿ, ನಿನ್ನ ಬಟ್ಟೆ ಹರಿದು, ಮುಖಕ್ಕೆ ಮಸಿ ಬಳಿದು ಚಪ್ಪಲಿ ಹಾರ ಹಾಕುತ್ತೇವೆ’ ಹೀಗೆಂದು ಬೆದರಿಕೆ ಹಾಕಿದ್ದಾರೆ ಎಂದು ಮುನಿರತ್ನ 7 ಪುಟಗಳ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತೊಂದೆಡೆ, ಮೊಟ್ಟೆ ಎಸೆದವರು ಎನ್ನಲಾದ ಆರೋಪಗಳಿಂದಲೂ ಪ್ರತಿದೂರು ದಾಖಲಾಗಿದೆ. ತಮ್ಮ ಮೇಲೆ ಗುಂಪು ಕಟ್ಟಿ ಹಲ್ಲೆ ಮಾಡಿದ್ದಾರೆಂದು ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಪ್ರತಿದೂರು ದಾಖಲಿಸಿದ್ದಾರೆ.
