ಛತ್ತೀಸ್ಗಢ
ನಾಯಿ ತನ್ನನ್ನು ಬೊಗಳಿತೆಂದು ವ್ಯಕ್ತಿಯೊಬ್ಬ ಅದರ ಮಾಲೀಕನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಛತ್ತೀಸ್ಗಢದ ರಾಯಗಢದಲ್ಲಿ ನಡೆದಿದೆ. 25 ವರ್ಷದ ವ್ಯಕ್ತಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಅವರ ಚಿಕ್ಕಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.
ಫಿಟ್ಟಿಂಗ್‌ಪರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಜಿತ್ ಖಾಲ್ಖೋ ರಾತ್ರಿ 8.30 ರ ಸುಮಾರಿಗೆ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಮೂವರು ವ್ಯಕ್ತಿಗಳು ಬಂದು ದಾಳಿ ನಡೆಸಿದ್ದಾರೆ. ಅವರ ಮೇಲೆ ಪದೇ ಪದೆ ಹರಿತವಾದ ಕೊಡಲಿಯಿಂದ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದರು, ಅವರನ್ನು ಉಳಿಸಲು ಚಿಕ್ಕಪ್ಪ ಸುರೇಶ್ ಮಿಂಜ್ ಪ್ರಯತ್ನಿಸಿದಾಗ ಅವರ ಮೇಲೂ ಹಲ್ಲೆ ನಡೆಸಲಾಯಿತು.
ಸುಜಿತ್‌ನ ಸಾಕು ನಾಯಿ ಜತೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯನ್ನು ನೋಡಿ ಅದು ಬೊಗಳಲು ಆರಂಭಿಸಿದಾಗ ಈ ಜಗಳ ಶುರುವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯು ನಿಂದನೆ ಮತ್ತು ಬೆದರಿಕೆಗಳಿಗೆ ಕಾರಣವಾಯಿತು. ದಾಳಿಕೋರರು ಬಲಿಪಶುವಿನ ಜೊತೆ ಹಳೆಯ ವೈಷಮ್ಯ ಹೊಂದಿದ್ದರು, ಇದು ದ್ವೇಷವನ್ನು ಇನ್ನಷ್ಟು ಹೆಚ್ಚಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ನಂತರ, ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಮೂವರು ಶಂಕಿತರನ್ನು ಬಂಧಿಸಲಾಗಿದೆ.ರಾಯ್‌ಗಢ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಂಗ್ ಪಟೇಲ್ ಈ ಬಂಧನವನ್ನು ದೃಢಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನಾಯಿ ಬೊಗಳುವ ವಿವಾದ ಮತ್ತು ಹಿಂದಿನ ದ್ವೇಷ ಎರಡೂ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ.ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
