ಬೆಂಗಳೂರು:
ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ವ್ಯಾಪ್ತಿಯಲ್ಲಿ 34 ವರ್ಷದ ಪಂಕ್ಚರ್ ಅಂಗಡಿ ಮಾಲೀಕನನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಭಾನುವಾರ ರಾತ್ರಿ ಘಟನೆ ನಡೆದಿದೆ. ಬೊಮ್ಮನಹಳ್ಳಿಯ ಮದೀನನಗರದ ಪಂಕ್ಚರ್ ಅಂಗಡಿ ಮಾಲೀಕ ಸೈಯದ್ ನೂರುಲ್ಲಾ ಮಂಗಳವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆರೋಪಿಗಳನ್ನು ಎನ್ ಪ್ರಕಾಶ್ (32) ಮತ್ತು ಎಂ ಕುಮಾರ್ ಗೌಡ (35) ಎಂದು ಗುರುತಿಸಲಾಗಿದೆ.
ಪಂಕ್ಚರ್ ಅಂಗಡಿ ಮಾಲೀಕ ಸೈಯದ್ ಮತ್ತು ಸಹಾಯಕ ಮಣಿಕಂಠ ರಾತ್ರಿ 11.30ರ ಸುಮಾರಿಗೆ ಹೊಸೂರು ರಸ್ತೆಯಲ್ಲಿರುವ ದ್ವಿಚಕ್ರ ವಾಹನ ಶೋರೂಂ ಬಳಿ ಟೀ ಕುಡಿಯಲು ಹೋಗಿದ್ದರು. ಅಲ್ಲಿ ಟೀ ಸಿಗದೇ ಇದ್ದಾಗ ಅದೇ ಪ್ರದೇಶದಲ್ಲಿದ್ದ ಇನ್ನೊಂದು ಅಂಗಡಿಗೆ ಹೋಗಿದ್ದಾರೆ.
ಹೋಗುವಾಗ ದಾರಿಯಲ್ಲಿ, ಖಾಲಿ ಸೈಟ್‌ನಲ್ಲಿ ಸೈಯದ್ ಕೆಲವು ಟೈರ್‌ಗಳನ್ನು ನೋಡಿದ್ದಾನೆ. ಅವುಗಳನ್ನು ತನ್ನ ಅಂಗಡಿಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಸ್ಥಳದ ಸಮೀಪವೇ ಕುಳಿತಿದ್ದ ಆರೋಪಿಗಳು ಸೈಯದ್ ಹಾಗೂ ಮಣಿಕಂಠ ಕಳ್ಳರೆಂದು ಶಂಕಿಸಿ ವಿಚಾರಣೆ ಆರಂಭಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳು ಬೆನ್ನಟ್ಟಿದ್ದರು. ಇಬ್ಬರು ಕಬ್ಬಿಣದ ರಾಡ್‌ನಿಂದ ಸೈಯದ್ ಮತ್ತು ಮಣಿಕಂಠ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಸೈಯದ್ ಪ್ರಜ್ಞಾಹೀನರಾದರು. ಮಣಿಕಂಠ ಸೈಯದ್‌ನ ಸ್ನೇಹಿತರಿಗೆ ಕರೆ ಮಾಡಿದ್ದಾನೆ. ನಂತರ ಅವರು ಸೈಯ್ಯದ್ ನನ್ನು ನಿಮ್ಹಾನ್ಸ್‌ಗೆ ಸೇರಿಸಿದರು. ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆತ ಮಂಗಳವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
