ಮಂಡ್ಯ
ಕರ್ನಾಟಕದ ಸರ್ಕಾರಿ ಸಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ, ಮಂಡ್ಯದ ‘ಮೈ ಶುಗರ್’ ಈ ವರ್ಷದ ಕಬ್ಬು ಅರೆಯುವುದನ್ನು ಬಂದ್ ಮಾಡಿದ್ದು, ಇದರ ಪರಿಣಾಮವಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ತವರು ಜಿಲ್ಲೆಯಲ್ಲೇ ಅನ್ನದಾತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ವರ್ಷದಲ್ಲಿ ಆಗಸ್ಟ್ನಿಂದ ಕಬ್ಬು ಅರೆಯುವಿಕೆಯನ್ನು ಪ್ರಾರಂಭ ಮಾಡಿತ್ತು. ಪ್ರಾರಂಭದಲ್ಲಿ ಬರದ ನೆಪನೊಡ್ಡಿ, 2 ಲಕ್ಷದ 5 ಮೆಟ್ರಿಕ್ ಟನ್ ಕಬ್ಬಯ ಅರೆಯುವ ಗುರಿ ನಿಗದಿಪಡಿಸಿತ್ತು. ಇದಕ್ಕಾಗಿ ತನ್ನ ವ್ಯಾಪ್ತಿ ಕಬ್ಬು ಬೆಳೆಗಾರರ ಜೊತೆ ಒಪ್ಪಂದ ಕೂಡ ಮಾಡಿಕೊಂಡಿತ್ತು. ಅದರಂತೆ ನವೆಂಬರ್ ಅಂತ್ಯಕ್ಕೆ 2 ಲಕ್ಷದ 01 ಟನ್ ಅನ್ನ ಕಬ್ಬನ್ನು ಅರೆಯಿಸಲಾಗಿದೆ. ಆದರೆ ಇನ್ನಷ್ಟು ಕಬ್ಬು ಬಾಕಿ ಇರುವಾಗಲೇ ಕಬ್ಬು ಅರೆಯುವುದನ್ನು ಪ್ರಸಕ್ತ ವರ್ಷಕ್ಕೆ ಬಂದ್ ಮಾಡಿದೆ.
ಒಪ್ಪಂದದಂತೆ ಕಾರ್ಖಾನೆ ಈ ಬಾರಿ ಕಬ್ಬು ಅರೆಯಲಾಗಿದೆ. ಜೊತೆಗೆ ವಿದ್ಯುತ್ ಉತ್ಪಾದನೆಯಿಂದ ಐದು ಕೋಟಿ ರೂಪಾಯಿ ಲಾಭವನ್ನು ಕೂಡ ಮಾಡಿದೆ. ಆದರೆ ಮೈ ಶುಗರ್ ವ್ಯಾಪ್ತಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಕಟಾವು ಆಗಿಲ್ಲ. ಈಗಾಗಲೇ ಕಬ್ಬಿನಲ್ಲಿ ಸೂಲಂಗಿ ಕೂಡ ಬಂದಿದೆ. ಕಬ್ಬು ತೂಕವನ್ನು ಕಳೆದುಕೊಳ್ಳುತ್ತಿದೆ ಹೀಗಾಗಿ ರೈತರ ಪಾಡು ಶೋಚನೀಯವಾಗಿದೆ.
ಬೇರೆ ಕಾರ್ಖಾನೆಗಳಿಗೂ ಕೂಡ ಕಬ್ಬನ್ನು ಸರಬರಾಜು ಮಾಡದ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ. ಸರ್ಕಾರವೇ ಇಂತಿಷ್ಟು ವ್ಯಾಪ್ತಿ ಮಾಡಿ, ಇಲ್ಲಿನ ಕಬ್ಬನ್ನು ಖಾಸಗಿ ಕಾರ್ಖಾನೆಗಳು ಪಡೆಯದಂತೆ ಆದೇಶ ಕೂಡ ಮಾಡಿತ್ತು. ಹೀಗಾಗಿ ಕಾರ್ಖಾನೆ ಬಂದ್ ಆಗಿ, ಕಬ್ಬು ಸರಬರಾಜು ಆಗದೇ ಇರುವುದು ಜಿಲ್ಲೆಯ ಕಬ್ಬು ಬೆಳೆಗಾರರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇನ್ನು ಉಳಿದ ಕಬ್ಬನ್ನು ಆಲೆಮನೆಗಳಿಗೆ ಸರಬರಾಜು ಮಾಡೋಣ ಅಂದರೆ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಖಾಸಗಿ ಕಾರ್ಖಾನೆಗಳು ಕೂಡ ತನ್ನ ವ್ಯಾಪ್ತಿಯ ಕಬ್ಬನ್ನ ಬಿಟ್ಟು ಬೇರೆ ಕಬ್ಬನ್ನ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಸಾಲ ಸೋಲ ಮಾಡಿ ಕಬ್ಬು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಟ್ಟಾರೆ ಮೈಶುಗರ್ ಸಕ್ಕರೆ ಕಾರ್ಖಾನೆ ಪ್ರಸಕ್ತ ವರ್ಷದ ಕಬ್ಬು ಅರೆಯುವಿಕೆಯನ್ನು ಸ್ಥಗಿತ ಮಾಡಿರುವುದು ಜಿಲ್ಲೆಯ ಕಬ್ಬು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮವಹಿಸಬೇಕಿದೆ.