ವಿಜಯನಗರ:
ಫೆಬ್ರವರಿ 18: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕ ಫೆಬ್ರವರಿ 18ರಂದು ಹೊರಬಿದ್ದಿದ್ದು, “ಮಳೆ ಬೆಳೆ ಸಂಪಾಯಿತಲೆ ಪರಾಕ್’ ಎಂದು ಗೊರವಪ್ಪ ನುಡಿದಿದ್ದಾನೆ.
ಈಶ್ವರನೇ ಗೊರವಪ್ಪನ ರೂಪದಲ್ಲಿ ದೈವವಾಣಿ ನುಡಿಯುತ್ತಾನೆಂದು ಈ ಭಾಗದಲ್ಲಿ ನಂಬಲಾಗುವ ಈ ಕಾರ್ಣಿಕದ ನಿಜವಾದ ಅರ್ಥ ಏನೇ ಇರಲಿ, ಭಕ್ತರು ತಮಗೆ ಬೇಕಾದ ಹಾಗೇ ಅರ್ಥೈಸಿಕೊಳ್ಳುತ್ತಿರುವುದಕ್ಕೂ ದಶಕಗಳ ಇತಿಹಾಸವಿದೆ.
‘ಮಳೆ ಬೆಳೆ ಸಂಪಾಯಿತಲೇ ಪರಾಕ್’ ಎಂಬ ಕಾರಣಿಕವನ್ನು ಈ ವರ್ಷ ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿದೆ. ರೈತರ ಬಾಳು ಹಸನಾಗಲಿದೆ ಎಂಬ ಅರ್ಥದಲ್ಲಿ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದರು. ಹದಿನೈದು ಅಡಿ ಬಿಲ್ಲನ್ನು ಏರಿ ರಾಮಪ್ಪ ಗೊರವಯ್ಯ ಭವಿಷ್ಯವಾಣಿ ನುಡಿದರು.
ಇನ್ನು ರಾಜಕೀಯವಾಗಿ ರಾಜ್ಯದ ನೈಋತ್ಯ ಭಾಗದ ಕುಬೇರ ಮೂಲೆಯ ಪ್ರಭಾವಿ ವ್ಯಕ್ತಿ ರಾಜ್ಯಭಾರ ಮಾಡಲಿದ್ದಾರೆ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಮೈಲಾರದ ಕಾರ್ಣಿಕ ವಾಣಿಯನ್ನು ವಿಶ್ಲೇಷಿಸಿದ್ದಾರೆ.
ಹಳೇ ಮೈಸೂರು ಭಾಗಕ್ಕೆ ಒಲಿಯುತ್ತಾ ಸಿಎಂ ಪಟ್ಟ
ರಾಜ್ಯದ ನೈಋತ್ಯ ಭಾಗವೆಂದರೆ ಅದು ಹಳೇ ಮೈಸೂರು ಭಾಗ. ಸದ್ಯ ಈ ಭಾಗದ ಪ್ರಭಾವಿ ವ್ಯಕ್ತಿಗಳೆಂದರೆ ಅದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ.
ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಇದ್ದರೆ, ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಬಿಟ್ಟರೆ ಯಾರೂ ಸಿಎಂ ಅಭ್ಯರ್ಥಿಗಳಿಲ್ಲ.
ರಾಜ್ಯಭಾರ ಮಾಡುವವರಾರು?
ಈ ಹಿಂದೆ ಮೈಲಾರ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಗಡ್ಡಧಾರಿ ವ್ಯಕ್ತಿಯೊಬ್ಬರು ರಾಜ್ಯದ ಮುಖಮಂತ್ರಿಯಾಗಲಿದ್ದರು ಎಂದು ತಿಳಿಸಿದ್ದರು. ಇದು ಆಗ ಬಹಳ ವಿವಾದವಾಗಿತ್ತು. ಆಗ ಎಲ್ಲರ ದೃಷ್ಟಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರತ್ತ ನೆಟ್ಟಿತ್ತು.
ಏಕೆಂದರೆ ಕೆಲವೇ ದಿನಗಳ ಮುಂಚೆ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಭೇಟಿ ನೀಡಿ, ಬೆಳ್ಳಿ ಹೆಲಿಕಾಪ್ಟರ್ ನೀಡಿದ್ದರು. ಅಲ್ಲದೇ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಜೊತೆ ಮಾತುಕತೆ ನಡೆಸಿದ್ದರು.
ಈ ವರ್ಷದ ಮೈಲಾರ ಭವಿಷ್ಯವಾಣಿಯಲ್ಲಿ ‘ಮಳೆ ಬೆಳೆ ಸಂಪಾಯಿತಲೇ ಪರಾಕ್’ ಎಂದು ಹೇಳಿದ್ದು, ಇದನ್ನು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ರಾಜ್ಯದ ನೈಋತ್ಯ ಭಾಗದ ಕುಬೇರ ಮೂಲೆಯ ಪ್ರಭಾವಿ ವ್ಯಕ್ತಿ ರಾಜ್ಯಭಾರ ಮಾಡುತ್ತಾರೆ.
ಅವರು ರಾಜ್ಯಕ್ಕೆ ಸುಖ, ಶಾಂತಿ, ನೆಮ್ಮದಿ ನೀಡುತ್ತಾರೆ ಎಂದು ವಿಶ್ಲೇಷಿಸಿದ್ದಾರೆ. ಮುಂದಿನ ಮೈಲಾರದ ಕಾರ್ಣಿಕದ ನಂತರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅನಂತರವೇ ಸ್ಪಷ್ಟ ಚಿತ್ರಣ ದೊರೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ