ಮೈಸೂರು ಅರಮನೆ-ಮೃಗಾಲಯ ಆವರಣಕ್ಕೆ ಶ್ರೀಗಂಧದ ಮ್ಯೂಸಿಎಂ ಸ್ಥಳಾಂತರ!?

ಮೈಸೂರು : 

     ಶ್ರೀಗಂಧದ ವಸ್ತುಸಂಗ್ರಹಾಲಯದ ಸ್ಥಳಾಂತರದ ಚಿಂತನೆ ಇದ್ದು, ಅರಮನೆ ಮೈದಾನ ಇಲ್ಲವೇ ಮೈಸೂರು ಮೃಗಾಲಯದಲ್ಲಿ ತೆರೆಯುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಸುಲಭವಾಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

      ಇಲ್ಲಿನ ಅಶೋಕ ಪುರಂನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿರುವುದು ಸಂತಸದ ವಿಷಯ. ಕಳೆದ ಬಾರಿ ಭೇಟಿ ವೇಳೆ ಮೈಸೂರು ಅರಮನೆಯಲ್ಲಿ ವಸ್ತುಸಂಗ್ರಹಾಲಯವನ್ನು ತೆರೆಯುವ ಉದ್ದೇಶ ಹೊಂದಿದ್ದಾಗಿ ತಿಳಿಸಿದ್ದೆ. ಆದರೆ, ಅಲ್ಲಿ ಸದ್ಯ ಕಟ್ಟಡದ ಕೊರತೆ ಇದ್ದಿದ್ದರಿಂದ ಅರಮನೆ ಮೈದಾನದ ಸಮಿತಿಯವರು ಕಟ್ಟಡವನ್ನು ಕಟ್ಟಿಕೊಡುವ ಬಗ್ಗೆ ಹೇಳಿದ್ದಾರೆ. ಇದೇ ವೇಳೆ ಮೈಸೂರು ಮೃಗಾಲಯದಲ್ಲೂ ಸ್ಥಳಾವಕಾಶ ಇರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಅಲ್ಲೂ ಸಹ ಮಾತುಕತೆ ನಡೆಸಲಾಗುತ್ತಿದೆ. ಬೆಲೆಬಾಳುವ ವಸ್ತುಗಳು ಇರುವುದರಿಂದ ಸುರಕ್ಷತೆಯನ್ನು ನೋಡಿಕೊಂಡು ಸೂಕ್ತ ಸ್ಥಳದಲ್ಲಿ ತೆರೆಯುವ ನಿರ್ಧಾರವನ್ನು ಅರಣ್ಯ ಇಲಾಖೆ ಮಾಡಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

      ಶ್ರೀಗಂಧಕ್ಕೆ ಸರ್ಕಾರದಿಂದ ಪ್ರೋತ್ಸಾಹ ಕೊಡಲಾಗುತ್ತಿದೆ. ಅಲ್ಲದೆ, ಖಾಸಗಿಯಾಗಿ ಬೆಳೆಸಲು ಸಹ ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಉತ್ತಮ ದರ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದು ಹೇಳಿದ ಸಚಿವರು, ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಯಾರು ಬೇಕಿದ್ದರೂ ವೀಕ್ಷಣೆ ಮಾಡಬಹುದಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಸಚಿವರು ತಿಳಿಸಿದರು.

ಶ್ರೀಗಂಧದ ಮ್ಯೂಸಿಎಂ ವೀಕ್ಷಣೆ :

     ಉದ್ಘಾಟನೆ ಬಳಿಕ ವಸ್ತು ಸಂಗ್ರಹಾಲಯದಲ್ಲಿರುವ ಶ್ರೀಗಂಧದ ವಿವಿಧ ತಳಿಗಳು, ಬೇರುಗಳು, ಕಾಂಡಗಳು, ಪ್ರಭೇದಗಳು, ಅವುಗಳ ಉಪಯೋಗಗಳು, ವರ್ಗೀಕರಣದ ವಿವರಗಳು ಸೆರಿದಂತೆ ಶ್ರೀಗಂಧದ ಮರದಿಂದ ಏನೆಲ್ಲ ಔಷಧೀಯ ಗುಣಗಳಿವೆ? ಹಾಗೂ ಅದರಿಂದ ಎಷ್ಟು ಲಾಭ ಮಾಡಬಹುದು? ಎಂಬ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಶ್ರೀಗಂಧದಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನೂ ಪ್ರದರ್ಶನಕ್ಕಿಡಲಾಗಿದ್ದನ್ನೂ ಸಚಿವರು ವೀಕ್ಷಿಸಿದರು.

ಪ್ರಾತ್ಯಕ್ಷಿಕೆ ವೀಕ್ಷಣೆ :

      ಮ್ಯೂಸಿಯಂನಲ್ಲಿ ಪ್ರೊಜೆಕ್ಟರ್ ಮೂಲಕ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಸಚಿವರು, ಶ್ರೀಗಂಧದ ಬೆಳೆಯಿಂದ ರೈತರು ಹೇಗೆಲ್ಲ ಲಾಭಗಳಿಸಬಹುದು? ಒಂದು ಮರದಿಂದ ಎಷ್ಟು ಆದಾಯ ಲಭಿಸಲಿದೆ? ಶ್ರೀಗಂಧದ ಕೃಷಿ ಹೇಗೆ? ಎಂಬ ಅಂಶಗಳ ವಿವರಣೆಯನ್ನು ನೋಡಿ, ರೈತರಿಗೆ ನಿಜಕ್ಕೂ ಇದು ಉಪಯುಕ್ತವಾಗಿದ್ದು, ಶ್ರೀಗಂಧದ ಮೂಲಕ ಲಾಭ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

      ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap