ಮೈಸೂರು
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮತದಾನದ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಈ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಏಪ್ರಿಲ್ 26ರಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಏಪ್ರಿಲ್ 26 ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತದಾನದ ದಿನ ಶುಕ್ರವಾರ ಬಂದ ಹಿನ್ನೆಲೆಯಲ್ಲಿ ಅನೇಕರು ವಾರಾಂತ್ಯಕ್ಕೆ ಮೈಸೂರಿಗೆ ಪ್ರವಾಸಕ್ಕೆ ಪ್ಲಾನ್ ರಚಿಸಲಿದ್ದಾರೆ. ಶನಿವಾರ, ಭಾನುವಾರ ರಜೆ ಇರುವ ಕಾರಣ ಮತದಾನ ಮಾಡದೇ ಟ್ರಿಪ್‌ಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಮತದಾನದ ಪ್ರಮಾಣ ಹೆಚ್ಚಿಸುವ ಸಲುವಾಗಿ ಅಧಿಕಾರಿಗಳು ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಮುಂದಾಗಿದ್ದಾರೆ.
ಚಿಕ್ಕಮಗಳೂರು 2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ 25 ಹಾಗೂ ಏಪ್ರಿಲ್ 26 ರಂದು ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರನ್ನು ಹೋಂ ಸ್ಟೇ /ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಸ್ವೀಕರಿಸಬಾರದು ಎಂದು ಜಿಲ್ಲಾಧಿಕಾರಿ ಮೀನಾ ನಾಗಾರಾಜ್ ಚಿಕ್ಕಮಗಳೂರು ರೆಸಾರ್ಟ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಜಿಲ್ಲೆಯಲ್ಲಿ ಹಾಗೂ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಏಪ್ರಿಲ್ 26 ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ಯಾವೊಬ್ಬ ಮತದಾರನು ಮತದಾನದಿಂದ ಹೊರಗುಳಿಯಬಾರದು. ಏಪ್ರಿಲ್ 26 ರಂದು ಶೇ 100ರಷ್ಟು ಮತದಾನ ಆಗುವಂತೆ ನೋಡಿಕೊಳ್ಳುವುದು ಜಿಲ್ಲಾ ಚುನಾವಣಾಧಿಕಾರಿಗಳ ಕರ್ತವ್ಯವಾಗಿರುತ್ತದೆ.
ರಾಜ್ಯದಲ್ಲಿ ಶೇ 100 ರಷ್ಟು ಮತದಾನ ಮಾಡಿಸುವ ನಿಟ್ಟಿನಲ್ಲಿ ಏಪ್ರಿಲ್ 25 ಹಾಗೂ ಏಪ್ರಿಲ್ 26 ರಂದು ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರನ್ನು ಹೋಂ ಸ್ಟೇ / ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಸ್ವೀಕರಿಸದೆ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಯಶ್ವಸಿಗೊಳಿಸಲು ಜಿಲ್ಲಾಡಳಿತದೊಂದಿಗೆ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳ ಮಾಲೀಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗಾರಾಜ್ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ