ನವದೆಹಲಿ:
ಮಹತ್ವದ ಬೆಳವಣಿಗೆಯಲ್ಲಿ ಖ್ಯಾತ ರೆಸ್ಲರ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಭಜರಂಗ್ ಪುನಿಯಾರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ಬರೊಬ್ಬರಿ 4 ವರ್ಷಗಳ ನಿಷೇಧಿಸಿದೆ.
ಡೋಪಿಂಗ್ ವಿಚಾರವಾಗಿ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಒಲಿಂಪಿಯನ್ ಕುಸ್ತಿಪಟು 30 ವರ್ಷದ ಬಜರಂಗ್ ಪೂನಿಯಾ ಅವರನ್ನು ನಾಲ್ಕು ವರ್ಷ ಅಮಾನತು ಮಾಡಿ ನಾಡಾ ಕ್ರಮ ಕೈಗೊಂಡಿದೆ.ನಾಡಾದ ಆದೇಶದ ಪ್ರಕಾರ ಪೂನಿಯಾ ಅವರು ಇನ್ನು ನಾಲ್ಕು ವರ್ಷ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕುಸ್ತಿ ಆಡುವಂತಿಲ್ಲ. ಹರಿಯಾಣದ ಸೋನೆಪತ್‌ನಲ್ಲಿ ಇದೇ ವರ್ಷ ಮಾರ್ಚ್ 10ರಂದು ನಡೆದ ಕುಸ್ತಿ ಆಯ್ಕೆ ಟ್ರಯಲ್ಸ್‌ನಲ್ಲಿ ನಿಷೇಧಿತ ಉದ್ದೀಪನ ಮದ್ದು ಪರೀಕ್ಷೆಗಾಗಿ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದಕ್ಕಾಗಿ ಪೂನಿಯಾ ಅವರನ್ನು ಏಪ್ರಿಲ್ 23ರಂದು ನಾಡಾ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಅದನ್ನು ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಸಂಸ್ಥೆಯೂ ಅಂಗೀಕರಿಸಿತ್ತು.
ಈ ಅಮಾನತು ಕ್ರಮವನ್ನು ಪ್ರಶ್ನಿಸಿ ಪೂನಿಯಾ ನಾಡಾಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಳೆದ ಸೆಪ್ಟೆಂಬರ್ 20 ಹಾಗೂ ಅಕ್ಟೋಬರ್ 4 ರಂದು ಅಂತಿಮ ವಿಚಾರಣೆ ನಡೆಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಿನ್ನೆ (ನ.26) ಪೂನಿಯಾ ಅವರನ್ನು ನಾಲ್ಕು ವರ್ಷ ಕುಸ್ತಿಯಿಂದ ಅಮಾನತು ಮಾಡಿ ಕ್ರಮ ಕೈಗೊಂಡಿದೆ.
ನಾಡಾದ ಕಲಂ 10.3.1 ರ ಅಡಿಯಲ್ಲಿನ ನಿರ್ಬಂಧಗಳಿಗೆ ಅಥ್ಲೀಟ್ ಬಜರಂಗ್ ಪೂನಿಯಾ ಅವರು ಹೊಣೆಗಾರ. ಇದರಿಂದ ಅವರು 4 ವರ್ಷಗಳ ಅವಧಿಯ ಅನರ್ಹತೆಗೆ ಗುರಿಯಾಗುತ್ತಾರೆ. ಈ ಅನರ್ಹತೆ ಈ ವರ್ಷ ಏಪ್ರಿಲ್ 23ರಿಂದಲೇ ಅನ್ವಯವಾಗುತ್ತದೆ ಎಂದು ನಾಡಾ ತಿಳಿಸಿದೆ.
ಭಾರತದ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಕುಸ್ತಿ ಪಟುಗಳು ಆರೋಪ ಎಸಗಿದ್ದರು. ಈ ನಿಟ್ಟಿನಲ್ಲಿ, ಬಜರಂಗ್, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ನೇತೃತ್ವದಲ್ಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ಬಳಿಕ ಸುಪ್ರೀಂ ಕೋರ್ಟ್ 23 ಏಪ್ರಿಲ್ 2023 ರಂದು ಆದೇಶ ನೀಡಿತ್ತು. ಆಗ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಪೂನಿಯಾ ಅವರು ಸದ್ಯ ಆ ಪಕ್ಷದ ರೈತ ಘಟಕದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಜರಂಗ್ ಪುನಿಯಾ, ‘ನಾಡಾ ನನ್ನನ್ನು ಹೇಗೆ ಗುರಿಯಾಗಿಸಿದೆ ಎಂಬುದನ್ನು ಇದು ತೋರಿಸುತ್ತದೆ. ನಾನು ಯಾವುದೇ ಕಾರಣಕ್ಕೂ ಕುಸ್ತಿಯನ್ನು ಮುಂದುವರಿಸಲು ಅವರು ಬಯಸುವುದಿಲ್ಲ. ಅವರ (ನಾಡಾ) ಬಳಿ ಉತ್ತರಗಳಿಲ್ಲ ಮತ್ತು ಅವರು ತಮ್ಮ ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲೂ ಸಿದ್ಧರಿಲ್ಲ. ಕ್ರೀಡಾಪಟುವಿಗೆ ಕಿರುಕುಳ ನೀಡುವುದು ಅವರ ಉದ್ದೇಶ. ತಪ್ಪು ಪ್ರಶ್ನಿಸಿದವರನ್ನು ಗುರಿಯಾಗಿಸಲಾಗುತ್ತಿದೆ’ ಎಂದು ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.
ಅಲ್ಲದೆ ‘ಅವಧಿ ಮೀರಿದ ಕಿಟ್ ಬಗ್ಗೆ ನಾಡಾ ಏಕೆ ಉತ್ತರಿಸುವುದಿಲ್ಲ? ಮುಂದಿನ ಪಂದ್ಯಕ್ಕೆ ತಯಾರಿ ನಡೆಸಲು ನನಗೆ ಕೇವಲ 20 ನಿಮಿಷಗಳಿವೆ ಎಂದು ತಿಳಿದಿದ್ದರೂ ಎರಡು ಪಂದ್ಯಗಳ ನಡುವೆ ಮಾದರಿಗಳನ್ನು ಸಂಗ್ರಹಿಸಲು ನನ್ನ ಮೇಲೆ ಏಕೆ ಒತ್ತಡ ಹೇರಲಾಯಿತು ಎಂಬುದಕ್ಕೆ ಏಕೆ ಉತ್ತರಿಸುವುದಿಲ್ಲ’ ಬಜರಂಗ್ ಪ್ರಶ್ನಿಸಿದ್ದರು.
ಅಂದಹಾಗೆ ಬಜಂರಗ್ ಪುನಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 1 ಬೆಳ್ಳಿ, 3 ಕಂಚು ಗೆದ್ದಿದ್ದಾರೆ. ಇದಲ್ಲದೆ ಏಷ್ಯನ್ ಗೇಮ್ಸ್‌ನಲ್ಲಿ 1 ಬಂಗಾರ, 1 ಬೆಳ್ಳಿ ಗೆದ್ದಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 2 ಬಂಗಾರ, 1 ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ.
