ನಾಗಮಂಗಲ ಗಲಾಟೆಗೆ ಗುಪ್ತಚರ ಇಲಾಖೆ ಮುಖ್ಯಸ್ಥರ ತಲೆದಂಡ?

ಬೆಂಗಳೂರು

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ಇದೀಗ ನಾನಾ ಸ್ವರೂಪವನ್ನೇ ಪಡೆದುಕೊಳ್ಳುತ್ತಿದೆ. ಗಲಭೆಯ ಕಿಚ್ಚು ರಾಜ್ಯಾದ್ಯಂತ ಹರಡುತ್ತಿದೆ. ಇದೇ ಪ್ರಕರಣ ಪೊಲಿಟಿಕಲ್ ಟರ್ನ್​ ಕೂಡ ಪಡೆದುಕೊಂಡಿದ್ದು, ಈ ಮಧ್ಯೆ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. ಗುಪ್ತಚರ ಇಲಾಖೆಯ ಎಡಿಜಿಪಿಯಾಗಿ ಹೇಮಂತ್ ನಿಂಬಾಳ್ಕರ್  ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ ಶರತ್ ಚಂದ್ರ ಅವರನ್ನು ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

   ಹೇಮಂತ್​ ನಿಂಬಾಳ್ಕರ್​ ಅವರ ಹೆಂಡತಿ ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್​ ಎಂ​ಎಲ್​ಎ ಆಗಿದ್ದರು. ಅವರು ಉತ್ತರ ಕನ್ನಡದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಹಾಗಾಗಿ ರಾಜಕೀಯ ವಲಯದಲ್ಲಿ ಹೇಮಂತ್​ ಅವರು ಕಾಂಗ್ರೆಸ್​ ನಾಯಕರಿಗೆ ಹತ್ತಿರ ಎಂದು ಭಾವಿಸಲಾಗಿದೆ.ಮಂಡ್ಯ ಜಿಲ್ಲೆಯ ನಾಗಮಂಗಲ ಗಲಭೆ ವಿಚಾರ ಸದ್ಯ ಸಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಈ ಮಧ್ಯೆ ಗುಪ್ತಚರ ಇಲಾಖೆ ಮುಖ್ಯಸ್ಥರ ತಲೆದಂಡ? ಮತ್ತಷ್ಟು ಅನುಮಾನ ಮತ್ತು ಕುತೂಹಲ ಕೆರಳಿಸಿದೆ.

   ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಕೆ.ವಿ.ಶರತ್ ಚಂದ್ರ ಅವರನ್ನು ನೇಮಕ ಮಾಡಲಾಗಿದ್ದು, ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ. ಗುಪ್ತಚರ ಇಲಾಖೆ ಎಡಿಜಿಪಿಯಾಗಿ ಹೇಮಂತ್ ನಿಂಬಾಳ್ಕರ್​ ಅವರನ್ನು ನೇಮಕ ಮಾಡಲಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ. ಹೇಮಂತ್ ನಿಂಬಾಳ್ಕರ್ ನೇಮಕ ಮುಂಚೆ ಇದ್ದ ಶರತ್ ಚಂದ್ರ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. 

   ಹೇಮಂತ್‌ ನಿಂಬಾಳ್ಕರ್‌ ಅವರು 1998ನೇ ಬ್ಯಾಚಿನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದು. 2023ರ ಜೂನ್‌ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ನೇಮಕಗೊಂಡಿದ್ದರು. ಈ ಹಿಂದೆ ಬೆಳಗಾವಿ ಎಸ್‌ಪಿ, ಬೆಂಗಳೂರಿನ ಜಂಟಿ ಆಯುಕ್ತ (ಸಿಸಿಬಿ), ಹೆಚ್ಚುವರಿ ಆಯುಕ್ತ (ಪೂರ್ವ), ಹೆಚ್ಚುವರಿ ಆಯುಕ್ತ (ಆಡಳಿತ) ಹಾಗೂ ಸಿಐಡಿ ಐಜಿಪಿ ಸೇರಿದಂತೆ ವಿವಿಧ ಹುದ್ದೆಗಳನ್ನು ಹೇಮಂತ್‌ ನಿಂಬಾಳ್ಕರ್‌ ಅವರು ನಿರ್ವಹಿಸಿದ್ದಾರೆ.