ನಾಗಮಂಗಲ ಗಲಭೆ: ನಾಶವಾದ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ….?

ಮಂಡ್ಯ 

    ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಕೋಮುಗಲಭೆ   ಸಂಭವಿಸಿತ್ತು. ಈ ಗಲಭೆಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿ ಮತ್ತು ಪೆಟ್ರೋಲ್​ ಬಾಂಬ್​ನಿಂದ ಹಲವು ಅಂಗಡಿಗಳು, ಸರಕುಗಳು ಸುಟ್ಟು ಭಸ್ಮವಾಗಿವೆ. ಗಲಭೆಯಿಂದಾಗಿ ನಾಗಮಂಗಲದಲ್ಲಿ ಅಪಾರ ಮೌಲ್ಯದ ಆಸ್ತಿ-ಪಾಸ್ತಿ ನಾಶವಾಗಿದೆ. ಗಲಭೆಯಿಂದ ಒಟ್ಟು 2.66 ಕೋಟಿ ಮೌಲ್ಯದ ಆಸ್ತಿ ನಾಶವಾಗಿದೆ.

   ನಾಗಮಂಗಲ‌ ಪಟ್ಟಣದಾದ್ಯಂತ 26 ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. 1 ಕೋಟಿ 47 ಲಕ್ಷ ಮೌಲ್ಯದ ಕಟ್ಟಡಗಳು ಸುಟ್ಟು ಭಸ್ಮವಾಗಿವೆ. 1 ಕೋಟಿ 18 ಲಕ್ಷ ಮೌಲ್ಯದ ಸರಕು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿದೆ. ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿದೆ.

   ಹೀಗಾಗಿ ವರದಿ ತಯಾರು ಮಾಡಲು ಎಸಿ ನೇತೃತ್ವದಲ್ಲಿ ಏಳು ಅಧಿಕಾರ ತಂಡ ರಚನೆ ಮಾಡಲಾಗಿತ್ತು. ಇದೀಗ ನಷ್ಟದ ಮೌಲ್ಯಮಾಪನ ಮಾಡಿ ವರದಿ ಸಿದ್ದಪಡಿಸಿ, ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೇವೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಮಾಹಿತಿ ನೀಡಿದರು. ಇನ್ನು ಎಫ್​ಐಆರ್​ನಲ್ಲಿ 4.5 ಕೋಟಿಯಷ್ಟು ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ. ದುಷ್ಕರ್ಮಿಗಳ ಕ್ರೌರ್ಯದಿಂದ, ವ್ಯಾಪಾರಸ್ಥರ ಬದುಕು ಬೀದಿ ಪಾಲಾಗಿದೆ.

   ಗಲಾಟೆ ಹಿಂದೆ ಪೊಲೀಸರ ಲೋಪ ದೋಷ ಎದ್ದು ಕಾಣುತ್ತಿದೆ. ಗಣೇಶ ವಿಸರ್ಜನೆ ಮೆರವಣಿಗೆಗೆ ಕಾವಲಿಗೆ 24 ಜನ ಡಿಎಆರ್​ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಈ ಸಿಬ್ಬಂದಿಗೆ ಊಟ ಕೊಡಿಸಲು ನಾಗಮಂಗಲ ಠಾಣೆ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಹಿಂದೇಟು ಹಾಕಿದ್ದರು. ಬದಲಿಗೆ 24 ಮಂದಿ ಡಿಎಆರ್​ ಸಿಬ್ಬಂದಿಯನ್ನು ಊಟಕ್ಕೆ ಬೇರೆ ಕಡೆ ಕಳುಹಿಸಿದ್ದರು. ರಿಸರ್ವ್ ಪೊಲೀಸ್ ಸಿಬ್ಬಂದಿ ‌ವಾಹನ ಹೊರಟ ಅರ್ಧ ಗಂಟೆ ನಂತರ ಕೋಮುಗಲಭೆ ಆರಂಭವಾಗಿತ್ತು.

   ಗಲಾಟೆ ಆರಂಭವಾದಾಗ‌ ಸ್ಥಳದಲ್ಲಿ ಕೇವಲ ಏಳು ಸಿಬ್ಬಂದಿ‌ ಮಾತ್ರ ಇದ್ದರು. ಈ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು‌ ಪರದಾಡಿದರು. ಪಿಎಸ್​ಐ ರವಿ ಸೇರಿದಂತೆ ಹಲವು ಸಿಬ್ಬಂದಿ ಮೇಲೆಯೇ ಕಿಡಿಗೇಡಿಗಳು ದಾಳಿ ಮಾಡಿದ್ದರು. ರಿಸರ್ವ್ ಸಿಬ್ಬಂದಿ ವಾಪಸ್‌ ಬರುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು. ಕಲ್ಲು, ದೊಣ್ಣೆ, ಮಾರಕಾಸ್ತ್ರ, ಪೆಟ್ರೋಲ್ ಬಾಂಬ್ ಎಸೆಯುವ ಜೊತೆಗೆ ‌ಅಂಗಡಿ ಮುಂಗಟ್ಟಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆಯಲಾಗಿತ್ತು. ಹೀಗಾಗಿ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರನ್ನು ಗೃಹ ಇಲಾಖೆ ಅಮಾನತು ಮಾಡಿತ್ತು.

Recent Articles

spot_img

Related Stories

Share via
Copy link
Powered by Social Snap