ಶಿರಸಿ:
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬಾಂಗ್ಲಾದೇಶಿಗರನ್ನು ಹುಡುಕಿ ತಕ್ಷಣವೇ ದೇಶದಿಂದ ಹೊರ ಹಾಕಬೇಕೆಂದು ಬಿಜೆಪಿ ಮುಖಂಡ, ನ್ಯಾಯವಾದಿ ನಾಗರಾಜ ನಾಯಕ ಆಗ್ರಹಿಸಿದ್ದಾರೆ. ಭಾರತ ದೇಶ ಬೇರೆ ದೇಶದವರಿಗೆ ಕೂಳು ಹಾಕಿ ಸಾಕಲು ಇರುವಂತಹ ಪ್ರದೇಶವಲ್ಲ. ಭಾರತ ಎಂದಿಗೂ ಭಾರತೀಯರಿಗೆ ಸೇರಿದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಾಂಗ್ಲಾದೇಶಿ ಮತ್ತು ಕೆಲವು ರೋಹಿಂಗ್ಯಾ ಮುಸಲ್ಮಾನರು ಅಕ್ರಮವಾಗಿ ಪಶ್ಚಿಮ ಬಂಗಾಲ, ಆಸ್ಸಾಂ ಮತ್ತು ಕೆಲವು ಪೂರ್ವಾಂಚಲ ರಾಜ್ಯಗಳಿಗೆ ಅಕ್ರಮ ಪ್ರವೇಶ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ. ಈ ರೀತಿಯ ನುಸುಳುಕೋರರು ಕರ್ನಾಟಕ ರಾಜ್ಯದಲ್ಲೂ ಸಹ ಸೇರಿಕೊಂಡಿರು ವುದು ಈಗಾಗಲೇ ಅನೇಕ ಕಡೆ ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಜನರೇ ಸ್ಪಯಂ ಸ್ಪೂರ್ತಿಯಿಂದ ಇಂತಹ ನುಸುಳುಕೋರರನ್ನು ಪತ್ತೆ ಹಚ್ಚುತ್ತಿದ್ದಾರೆ.
ಉತ್ತರ ಕನ್ನಡದಲ್ಲಿ ಏಷಿಯಾದ ಅತಿದೊಡ್ಡ ನೌಕಾನೆಲೆ, ಬಹಳ ಸೂಕ್ಷ್ಮ ಪ್ರದೇಶವಾದ ಕೈಗಾ ಅಣುಸ್ಥಾವರ, ಕದ್ರಾ ಡ್ಯಾಂ ಮತ್ತು ಇನ್ನೀತರ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲವೂ ಬಹಳ ಸೂಕ್ಷ್ಮ ಪ್ರದೇಶಗಳಾಗಿದ್ದು ಸ್ವಲ್ಪ ಎಚ್ಚರ ತಪ್ಪಿದರೂ ಬಹುದೊಡ್ಡ ಅಪಾಯ ನಮ್ಮ ಜಿಲ್ಲೆಗೆ ಆಗುವ ಸಾಧ್ಯತೆ ಇರುತ್ತದೆ. ಅಂತಹದರಲ್ಲಿ ಉತ್ತರ ಕನ್ನಡದಲ್ಲಿ ಬಾಂಗ್ಲಾ ಮತ್ತು ರೋಹಿಂಗ್ಯಾ ಮುಸ್ಲಿಮರು ಇರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.
ನೌಕಾನೆಲೆ ಮತ್ತು ಕೈಗಾ ಅಣುಸ್ಥಾವರದ ಪ್ರದೇಶಗಳಲ್ಲಿ ಹೊರ ರಾಜ್ಯದ ಅನೇಕ ಕಾರ್ಮಿಕರಿದ್ದಾರೆ. ಅವರ ನಿಜವಾದ ಗುರುತು ಪತ್ತೆ ಹಚ್ಚಿ ಅವರು ಭಾರತೀಯರೋ, ಅಲ್ಲವೋ ನೋಡಿ ಎಚ್ಚರ ಗೊಳ್ಳುವ ಅವಶ್ಯಕತೆ ಇರುತ್ತದೆ. ಕೆಲವು ನುಸುಳುಖೋರರು ಆಧಾರ ಕಾರ್ಡ್, ಇತರೇ ಧಾಖಲೆ ಗಳನ್ನು ಮಾಡಿಸಿಕೊಂಡು ಭಾರತೀಯರ ರೂಪದಲ್ಲಿ ಕರ್ನಾಟಕದಲ್ಲಿಯೂ ಸಹ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಮಹತ್ತರ ಯೋಜನೆಗಳು ಕಾರ್ಯರೂಪಕ್ಕೆ ಈ ಜಿಲ್ಲೆಯಲ್ಲಿ ಇಳಿದಿರುವ ಪ್ರದೇಶಗಳಲ್ಲಿ ಬಾಂಗ್ಲಾ ಮತ್ತು ರೋಹಿಂಗ್ಯಾ ಮುಸ್ಲಿಮರ ವಿರುದ್ಧ “ಕೂಬಿಂಗ್ ಆಪರೇಷನ್” ನಡೆಸುವ ಅವಶ್ಯಕತೆ ಇದ್ದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ನ್ಯಾಯವಾದಿ ನಾಗರಾಜ ನಾಯಕ ಆಗ್ರಹಿಸಿದ್ದಾರೆ.
