ಬೆಂಗಳೂರು:
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರರನ್ನು ವಿಶೇಷ ತನಿಖಾ ತಂಡ ಮಂಗಳವಾರ ವಿಚಾರಣೆ ನಡೆಸಿದೆ.ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರು ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಪ್ರಕರಣದಲ್ಲಿ ನಾಗೇಂದ್ರ ಹೆಸರು ಕೇಳಿಬಂದಿದ್ದರಿಂದ ಜೂನ್ 6ರಂದು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಚಂದ್ರಶೇಖರನ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರ್ಕಾರಿ ಸ್ವಾಮ್ಯದ ನಿಗಮಕ್ಕೆ ಸೇರಿದ 187 ಕೋಟಿ ರೂಪಾಯಿಯನ್ನು ಅದರ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಚಂದ್ರಶೇಖರನ್ ಆರೋಪಿಸಿದ್ದರು. ಇದಲ್ಲದೆ, ಕೆಲವು ಐಟಿ ಕಂಪನಿಗಳು ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕ್‌ನ ವಿವಿಧ ಖಾತೆಗಳಿಗೆ 88.62 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಜಮಾ ಮಾಡಲಾಗಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರವು ಅದರ ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿದ್ದರೆ, ಕೇಂದ್ರೀಯ ತನಿಖಾ ದಳವೂ ಏಕಕಾಲದಲ್ಲಿ ತನಿಖೆ ನಡೆಸುತ್ತಿದೆ.
ಇನ್ನು ಇಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಖಾತೆ ಹೊಂದಿದ್ದ ನಾಗೇಂದ್ರ ಅವರನ್ನು ಐದು ಗಂಟೆಗೂ ಹೆಚ್ಚು ಕಾಲ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಈ ವೇಳೆ ನಿಗಮದ ಅಧ್ಯಕ್ಷರೂ ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಸಹ ವಿಚಾರಣೆಗೆ ಹಾಜರಾಗಿದ್ದಾರೆ. ಏತನ್ಮಧ್ಯೆ, ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಇಬ್ಬರು ನಿಗಮದ ಅಧಿಕಾರಿಗಳ ನಡುವಿನ ಸಂಭಾಷಣೆಯ ಎರಡು ಆಡಿಯೊ ಕ್ಲಿಪ್‌ಗಳು ವೈರಲ್ ಆಗಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಆಡಿಯೋ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ವಿಚಾರಣೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ನಾವು ತನಿಖಾ ತಂಡಕ್ಕೆ ಮುಕ್ತ ಹಸ್ತ ನೀಡಿದ್ದೇವೆ. ಈಗಾಗಲೇ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶೀಘ್ರದಲ್ಲೇ ಸತ್ಯ ಹೊರಬರಲಿದೆ ಎಂದು ಶಿವಕುಮಾರ್ ಹೇಳಿದರು.
