ಬೆಂಗಳೂರು:
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಇದರ ಬೆನ್ನಲ್ಲೇ ಸಚಿವ ಬಿ ನಾಗೇಂದ್ರ ಅವರು ಗುರುವಾರ ರಾಜೀನಾಮೆ ಗುರುವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇ ಆದರೆ, ಭ್ರಷ್ಟಾಚಾರ ಆರೋಪದ ಮೇಲೆ ರಾಜೀನಾಮೆ ಸಲ್ಲಿಸಿದ ಮೊದಲ ಸಚಿವ ಎಂಬ ಅಪಖ್ಯಾತಿಗೆ ಒಳಗಾಗಲಿದ್ದಾರೆ.
ಎಸ್‌ಟಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಬಹುಕೋಟಿ ಹಗರಣ ಬಯಲಿಗೆ ಬಂದಿದ್ದು, ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಇದೀಗ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಬಹುಕೋಟೆ ಹಗರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರೋದ್ರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿ. ನಾಗೇಂದ್ರಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ನಾಗೇಂದ್ರರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಕಾವೇರಿ ನಿವಾಸಕ್ಕೆ ಕರೆದುಕೊಂಡು ಇಬ್ಬರು ನಾಯಕರು ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಒಂದೆಡೆ ಬಹುಕೋಟಿ ಹಗರಣದಲ್ಲಿ ಸಚಿವ ನಾಗೇಂದ್ರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ನಾಗೇಂದ್ರ ಪಿಎ ನೆಕ್ಕಂಟಿ ನಾಗರಾಜ್‌ನನ್ನು ಎಸ್‌ಟಿಐ ಬಂಧಿಸಿದೆ. ಮತ್ತೊಂದೆಡೆ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ಮುಂದಾಗಿದೆ. ಹೀಗಾಗಿ ಇದಕ್ಕೂ ಮುನ್ನವೇ ನಾಗೇಂದ್ರ ರಾಜೀನಾಮೆ ಪಡೆಯಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದೆ.
ಸಿಎಂ ಹಾಗೂ ಡಿಸಿಎಂ ಇಬ್ಬರೂ ರಾಜೀನಾಮೆ ನೀಡುವಂತೆ ನಾಗೇಂದ್ರ ಮನವೊಲಿಸಿದ್ದು, ಇದರ ಬೆನ್ನಲ್ಲೇ ಇಂದು . ಮಧ್ಯಾಹ್ನವೇ ನಾಗೇಂದ್ರ ಅವರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಸ್ವಇಚ್ಚೆಯಿಂದ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಹಾಗೂ ಸರ್ಕಾರಕ್ಕೆ ಮುಜುಗರವಾಗಬಾರದು ಹಾಗೂ ಎಸ್‌ಐಟಿ ತನಿಖೆ ಪಾರದರ್ಶಕವಾಗಿ ನಡೆಯಲೆಂದು ರಾಜೀನಾಮೆ ಕೊಡುತ್ತಿದ್ದೇನೆಂದು ಮಾಧ್ಯಮಕ್ಕೆ ತಿಳಿಸುವಂತೆ ನಾಗೇಂದ್ರಗೆ ಸಿಎಂ ಸೂಚನೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ನಾಲ್ಕು ಬಾರಿ ಶಾಸಕರಾಗಿದ್ದ ನಾಗೇಂದ್ರ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ 187.3 ಕೋಟಿ ರೂಪಾಯಿ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ.
ಹಗರಣ ಸಬಂಧ ಕಾರ್ಪೊರೇಷನ್ ಸೂಪರಿಂಟೆಂಡೆಂಟ್ ಚಂದ್ರಶೇಖರನ್ 12 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ಸಚಿವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಯೂನಿಯನ್ ಬ್ಯಾಂಕ್ ಹಿರಿಯ ಅಧಿಕಾರಿಗಳ ಪತ್ರದ ಅನ್ವಯ ಸಿಬಿಐ ಕೂಡ ಈಗಾಗಲ ಐವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದೆ. ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಕೂಡ ಈಗಾಗಲೇ ಪ್ರಕರಣದ ತನಿಖೆ ಆರಂಭಿಸಿದೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಸಿಬಿಐಗೆ ಬ್ಯಾಂಕ್ನವರು ಪತ್ರ ಬರೆದಿದ್ದರು. ಮೂರು ಕೋಟಿ ರೂಪಾಯಿ ಮೊತ್ತಕ್ಕಿಂತ ಹಚ್ಚಿನ ಹಗರಣ ಆಗಿದ್ದರೆ ಸ್ವಯಂಪ್ರೇರಿತ ಕೇಸ್ ದಾಖಲಿಸಬಹುದು ಅಂತ ಕಾನೂನು ಇದೆ. ಅದರಂತೆ ಸಿಬಿಐ ಕೇಸ್ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಸರ್ಕಾರದ ಇಲಾಖೆಗಳ ತನಿಖೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಸಿಬಿಐ ಪತ್ರ ಬರೆದ ಮೇಲೆ ತೀರ್ಮಾನ ಮಾಡಬೇಕು. ಸರ್ಕಾರಕ್ಕೆ ಪತ್ರ ಬರೆದ ಮೇಲೆ ಸಚಿವರ ತನಿಖೆ ಬಗ್ಗೆ ನಿರ್ಧಾರ ಮಾಡುತ್ತೇವೆ. ಸಚಿವರನ್ನು ಕರೆದು ಸಿಬಿಐ ತನಿಖೆ ಮಾಡಬಹುದು. ಅಗತ್ಯ ಬಂದರೆ ಕೇಸ್ ನ್ನು ಸಿಬಿಐಗೆ ನಾವೇ ಕೋಡುತ್ತೇವೆ. ಮೊದಲು ಅವರು ಪತ್ರ ಬರೆಯಲಿ. ನಾವು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದರು.