ಬೆಂಗಳೂರು
ನಮ್ಮ ಮೆಟ್ರೋ ರಾಜಧಾನಿ ಬೆಂಗಳೂರಿಗರ ಜೀವನಾಡಿಯಾಗಿದ್ದು, ಕಳೆದ 12 ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ನಮ್ಮ ಮೆಟ್ರೋ ಪ್ರಯಾಣಿಕರ ಸೇವೆಯಲ್ಲಿ ಹೊಸ ದಾಖಲೆಯೊಂದನ್ನು ಮಾಡಿದೆ. ಆಗಸ್ಟ್ 6 ರಂದು ಅತಿ ಹೆಚ್ಚು ಮಂದಿ ಪ್ರಯಾಣ ಮಾಡಿದ್ದು, ಹಿಂದಿನ ಎಲ್ಲಾ ದಾಖಲೆಯನ್ನು ಅಳಿಸಿ ಹಾಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಂಆರ್‌ಸಿಎಲ್, ಹಿಂದಿನ ರೈಡರ್‌ಶಿಪ್‌ಗಳ ದಾಖಲೆಯನ್ನು ಮೀರಿಸಿ ಆಗಸ್ಟ್ 6 ರಂದು (ಮಂಗಳವಾರ) ದಿನವಿಡೀ ನಮ್ಮ ಮೆಟ್ರೋ ರೈಲುಗಳಲ್ಲಿ ಒಟ್ಟು 8.26 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ. ಇದು ಈ ಹಿಂದಿನ ರೈಡರ್‌ಶಿಪ್‌ಗಳಿಗೆ ಹೊಲಿಸಿದರೆ ಅತಿ ಹೆಚ್ಚು. ಈ ಮೂಲಕ ಹೊಸ ದಾಖಲೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದೆ.
ಆಗಸ್ಟ್ 6ರಂದು ಒಟ್ಟಾರೆ 8,26,883 ಪ್ರಯಾಣಿಕರಿಂದ ಮೆಟ್ರೋ ಬಳಕೆಯಾಗಿದೆ. ನಮ್ಮ ಮೆಟ್ರೋವನ್ನು ತಮ್ಮ ಪ್ರಯಾಣದ ಪಾಲುದಾರರನ್ನಾಗಿ ಮಾಡಿಕೊಂಡಿದ್ದಕ್ಕಾಗಿ ಮತ್ತು ವಾತಾವರ್ಣದ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವನ್ನು ಬೆಂಬಲಿಸುತ್ತಿರುವುದಕ್ಕೆ ಪ್ರಯಾಣಿಕರಿಗೆ ಧನ್ಯವಾದಗಳು ಎಂದು ಬಿಎಂಆರ್‌ಸಿಎಲ್ ಟ್ವೀಟ್ ಮಾಡಿದೆ.
ಬೆಂಗಳೂರು ಮೆಟ್ರೋ ಎಂದೂ ಕರೆಯಲ್ಪಡುವ ನಮ್ಮ ಮೆಟ್ರೋ, ದೆಹಲಿ ಮೆಟ್ರೋ ಬಿಟ್ಟರೆ ದೇಶದಲ್ಲಿಯೇ ಅತ್ಯಧಿಕ ಉದ್ದನೆಯ ಮಾರ್ಗವನ್ನು ಹೊಂದಿದೆ. ಭಾರತದಲ್ಲಿ ಎರಡನೇ ಅತಿ ಉದ್ದದ ಕಾರ್ಯಾಚರಣೆಯ ಮೆಟ್ರೋ ಜಾಲದಲ್ಲಿ ಅತ್ಯಧಿಕ ಪ್ರಯಾಣಿಕರು ಸಂಚಾರ ಮಾಡುವ ಮೂಲಕ ಹೊದ ದಾಖಲೆ ಬರೆದಿದೆ ಎಂದು ಬಿಎಂಆರ್‌ಸಿಎಲ್ ಹೆಮ್ಮೆಪಟ್ಟಿದೆ.
ಕಳೆದ 2011ರಿಂದ ನಮ್ಮ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ಈವರೆಗೆ ಪ್ರತಿನಿತ್ಯ ಸರಾಸರಿ 6.36 ಲಕ್ಷ ಜನರು ಸಂಚಾರ ಮಾಡುತ್ತಾರೆ. ಆದರೆ, 2024ರ ಆಗಸ್ಟ್ 06ರ ಮಂಗಳವಾರದಂದು ಬರೋಬ್ಬರಿ 8.26 ಲಕ್ಷ ಪ್ರಯಾಣಿಕರು ಒಂದೇ ದಿನದಲ್ಲಿ ಸಂಚಾರ ಮಾಡಿದ್ದಾರೆ. ಕಳೆದ 12 ವರ್ಷಗಳ ನಂತರ ದಾಖಲೆ ಪ್ರಮಾಣದಲ್ಲಿ ಅತ್ಯಧಿಕ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಬೆಂಗಳೂರಿನಲ್ಲಿ 2011ರ ಅಕ್ಟೋಬರ್ 20ರಿಂದ ನಮ್ಮ ಮೆಟ್ರೋ ಆರಂಭವಾಗಿದ್ದು, ಈಗ ಒಟ್ಟು 66 ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.