ಬೆಂಗಳೂರು:
ಪರಿಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾದ ‘ನಂದಿನಿ ಹಾಲಿನ’ ಉತ್ಪನ್ನಗಳಿಗೆ ದೇಶದಾದ್ಯಂತ ಬೇಡಿಕೆ ವ್ಯಕ್ತವಾಗುತ್ತಿದ್ದು, ಹೊಸವರ್ಷಕ್ಕೆ ರಾಜಸ್ಥಾನದಲ್ಲೂ ತನ್ನ ಚಾಪು ಮೂಡಿಸಲು ಸಜ್ಜಾಗಿದೆ.
ಈ ಕುರಿತಂತೆ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರ ಗುಜರಾತಿನ ಅಮುಲ್ ಜೊತೆಗೆ ಕೆಎಂಎಫ್ ಅನ್ನು ವಿಲೀನಗೊಳಿಸಲು ಮುಂದಾಗಿತ್ತು. ಆದರೀಗ ರಾಜಧಾನಿ ದೆಹಲಿಯಲ್ಲೂ ಬಹು ಬೇಡಿಕೆ ಸೃಷ್ಟಿಸಿಕೊಂಡಿರುವ ನಂದಿನಿ ಉತ್ಪನ್ನಗಳು ಉತ್ತರದ ರಾಜ್ಯಗಳಿಗೆ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. ರಾಜ್ಯದಲ್ಲಿ ಪ್ರತಿನಿತ್ಯ 1 ಕೋಟಿ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಹೊರರಾಜ್ಯಗಳಿಗೂ ಸರಬರಾಜಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.ಕರುನಾಡ ರೈತರು ಶ್ರಮದಿಂದ ಕಟ್ಟಿರುವ ಕೆಎಂಎಫ್ ಅನ್ನು ಉಳಿಸಿ, ಬೆಳೆಸುತ್ತೇವೆ ಎಂದು ಹಿಂದೆ ಕಾಂಗ್ರೆಸ್ ಸರ್ಕಾರ ಮಾತುಕೊಟ್ಟಿತ್ತು, ಈಗ ನುಡಿದಂತೆ ನಡೆಯುತ್ತಿದೆ ಎಂದಿದ್ದಾರೆ.