ನವದೆಹಲಿ :
ಕೆ.ಎಂ.ಎಫ್‌ನ ನಂದಿನಿ ಉತ್ಪನ್ನಗಳು ಕರ್ನಾಟಕದ ಹೆಮ್ಮೆ ಅಂತಾನೇ ಹೇಳಬಹುದು. ನಂದಿನಿ ಬ್ರ್ಯಾಂಡ್‌ನ ಹಾಲು, ಮೊಸರು, ತುಪ್ಪ, ಬೆಣ್ಣೆ, ಸಿಹಿ ತಿನಿಸುಗಳೆಂದರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಒಂದು ಲೆಕ್ಕದಲ್ಲಿ ನಂದಿನಿ ನಮ್ಮ ರಾಜ್ಯದ ಜನರ ನಂಬಿಕೆ ಮತ್ತು ವಿಶ್ವಾಸ ಪಡೆದ ಬ್ರ್ಯಾಂಡ್ ಅಂದ್ರೂ ತಪ್ಪಾಗಲಾರದು. ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನವನ್ನು ನೀಡುತ್ತಿದ್ದ ಕೆ.ಎಂ.ಎಫ್ ಕೆಲ ದಿನಗಳ ಹಿಂದೆಯಷ್ಟೆ ರೆಡಿ ಟು ಕುಕ್ ಪರಿಕಲ್ಪನೆಯಡಿ ದೋಸೆ ಹಿಟ್ಟನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೀಗ ಕೆಎಂಎಫ್ ಮತ್ತೊಮ್ಮೆ ಸುದ್ದಿಯಲ್ಲಿದ್ದು, ದೆಹಲಿಯಲ್ಲಿ ತನ್ನ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ರಾಷ್ಟ್ರ ರಾಜಧಾನಿಯಲ್ಲೂ ತನ್ನ ವ್ಯಾಪ್ತಿಯನ್ನು ಮುಂದುವರೆಸುದಾಗಿ ಹೇಳಿದೆ.
ನವೆಂಬರ್ 21 ಅಂದರೆ ನಾಳೆ ಕರ್ನಾಟಕ ಹಾಲು ಒಕ್ಕೂಟ ಹಾಲು, ಮೊಸರಿನಂತಹ ತಾಜಾ ಡೈರಿ ಉತ್ಪನ್ನಗಳೊಂದಿಗೆ ರಾಷ್ಟ್ರ ರಾಜಧಾನಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಜ್ಜಾಗಿದೆ. ಈ ಮೂಲಕ ದೆಹಲಿಯ ಡೈರಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಮದರ್ ಡೈರಿ, ಅಮುಲ್, ಮಧುಸೂದನ್ ಮತ್ತು ಸಮಸ್ತೆ ಇಂಡಿಯಾದಂತಹ ಬ್ರ್ಯಾಂಡ್‌ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.
ನಾಳೆ ಅಂದರೆ ನವೆಂಬರ್ 21 ರಂದು ಸಿಎಂ ಸಿದ್ದರಾಮಯ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಂದಿನಿ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ. ಆರಂಭಿಕ ಹಂತದಲ್ಲಿ ನಿತ್ಯ 1 ಲಕ್ಷ ಲೀಟರ್ ಹಾಲನ್ನು ದೆಹಲಿಗೆ ಪೂರೈಸಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಕೆ.ಎಂ.ಎಫ್ ಐದು ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿಯನ್ನು ಹೊಂದಿದೆ, ಅಷ್ಟೇ ಅಲ್ಲದೆ ಮಂಡ್ಯದಿಂದ ದೆಹಲಿ, ಹರಿಯಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಲು ಸಾಗಿಲು 2,190 ಟ್ಯಾಂಕರ್‌ಗಳನ್ನು ಬಳಸಲು ಕೆಎಂಎಫ್ ಯೋಜಿಸಿದೆ.