ಉತ್ತರ ಭಾರತಕ್ಕೂ ಕಾಲಿಟ್ಟ ನಂದಿನಿ…..!

ನವದೆಹಲಿ:

    ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಿರುವ ಕರ್ನಾಟಕ ಹಾಲು ಒಕ್ಕೂಟದ  ನಂದಿನಿ ಬ್ರ್ಯಾಂಡ್ ಇದೀಗ ಉತ್ತರ ಭಾರತದಲ್ಲೂ ತನ್ನ ಕದಂಬ ಬಾಹುಗಳನ್ನು ಚಾಚಲು ಹೊರಟಿದೆ.

    ಕರ್ನಾಟಕದ ನಂದಿನಿ ಹಾಲು ಉತ್ಪನ್ನ ಇದೀಗ ಉತ್ತರ ಭಾರತದಲ್ಲೂ ತನ್ನ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಅಧಿಕೃತ ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. ಇಂದು ದೆಹಲಿಯ ಅಶೋಕ ಹೊಟೇಲ್​​ನಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಬಿಡುಗಡೆ ಮಾಡುವ ಮೂಲಕ ಅಧಿಕೃತ ಮಾರಾಟಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ದೆಹಲಿಯ ಅಶೋಕ್ ಹೊಟೇಲ್​ಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ ಕನ್ನಡಿಗರಿಂದ ಪೂರ್ಣಕುಂಭ ಸ್ವಾಗತ ದೊರೆಯಿತು.

   ಈ ವೇಳೆ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್, ‘ದೆಹಲಿಯಲ್ಲಿ 3 ರಿಂದ 4 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಬೇಕು ಎಂಬ ಗುರಿ ಹಾಕಿಕೊಂಡಿದ್ದೇವೆ. ಇನ್ನು ಮುಂದೆ ದೆಹಲಿಯಲ್ಲಿ ಶೇ 100 ರಷ್ಟು ಪರಿಶುದ್ಧ ಹಾಲು ಸಿಗಲಿದೆ. ಶುದ್ಧ ಹಸುವಿನ ಹಾಲನ್ನು ದೆಹಲಿ ಜನರಿಗೆ ನೀಡುತ್ತೇವೆ ಎಂದರು. 

   ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್​ ಈಗ 50 ವರ್ಷದ ಮೈಲಿಗಲ್ಲು ಸಾಧಿಸಿದ್ದು, ಈ ಸಂದರ್ಭದಲ್ಲೇ ಸಂಸ್ಥೆಯ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಕೆಲವು ತಿಂಗಳ ಹಿಂದೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್​​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವವನ್ನು ಕೆಎಂಎಫ್​ ವಹಿಸಿತ್ತು.

   ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ‘ನಂದಿನಿ’ ಬ್ರ್ಯಾಂಡ್ ಹೆಸರು ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ, ವಿಶ್ವಕಪ್ ವೇಳೆ ನಂದಿನಿ ಉತ್ಪನ್ನಗಳನ್ನೂ ಪೂರೈಸಲಾಗಿತ್ತು. ಆ ಮೂಲಕ ವಿಶ್ವಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ಗಮನ ಸೆಳೆದಿದ್ದವು.ವಿಶ್ವಕಪ್ ವೇಳೆ ನಂದಿನಿ ಬ್ರ್ಯಾಂಡ್​ನ ಫ್ರೋಝನ್ ಸಿಹಿತಿಂಡಿಗಳು, ಹಾಲಿನಿಂದ ಕೂಡಿದ ಎನರ್ಜಿ ಡ್ರಿಂಕ್ ನಂದಿನಿ ಸ್ಪ್ಲಾಶ್​ ಅನ್ನು ಕೆಎಂಎಫ್​​ ಅಮೆರಿಕಕ್ಕೆ ಪೂರೈಕೆ ಮಾಡಿತ್ತು. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಉತ್ಪನ್ನಗಳ ಅಧಿಕೃತ ಮಾರಾಟ ಆರಂಭವಾಗಿದೆ.

Recent Articles

spot_img

Related Stories

Share via
Copy link
Powered by Social Snap