ಸಿದ್ದರಾಮಯ್ಯನವರು ಈಗ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ : ನಾರಾಯಣಸ್ವಾಮಿ

ಬೆಂಗಳೂರು

    ಸಿದ್ದರಾಮಯ್ಯನವರು ಈಗ ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಅವರಿಗೂ ನಿಯಂತ್ರಣ ಇಲ್ಲ. ಹೈಕಮಾಂಡನ್ನು ಸಿದ್ದರಾಮಯ್ಯ ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

   ಮೊಂಡು ಎಮ್ಮೆ, ಮೊಂಡು ಹಸುಗಳು ಯಾರ ಮಾತನ್ನೂ ಕೇಳುವುದಿಲ್ಲ. ಎಲ್ಲಿ ಹುಲ್ಲು ಕಾಣುತ್ತೋ, ಮೇವು ಕಾಣುತ್ತೋ ಅಲ್ಲಿಗೆ ನುಗ್ಗಿಕೊಂಡು ಹೋಗುತ್ತವೆ. ಅಂಥ ಹಸು, ಎಮ್ಮೆಗಳಿಗೆ ಜೋರಾಗಿ ಹೋಗದಂತೆ ಕುತ್ತಿಗೆಗೆ ಒಂದು ದಪ್ಪದ ಕಡ್ಡಿ ಕೆಳಗೆ ಹಾಕುತ್ತಾರೆ. ಇದನ್ನು ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ಹೈಕಮಾಂಡ್ ಹಾಕಬೇಕಿತ್ತು. ಆದರೆ, ಅವರಿಗೂ ನಿಯಂತ್ರಣ ಇಲ್ಲ. ಹೈಕಮಾಂಡನ್ನು ಸಿದ್ದರಾಮಯ್ಯ ಕಂಟ್ರೋಲ್ ಮಾಡುತ್ತಿದ್ದಾರೆ ಎಂದರು.

   ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆ ಮಾಡದಿರೆ, ತಪ್ಪು ಎತ್ತಿ ತೋರಿಸಿದರೆ, ಅವರನ್ನು ಕೆಟ್ಟ ಕೆಟ್ಟದ್ದಾಗಿ ಬೈಯುತ್ತಾರೆ. ಪೆಟ್ರೋಲ್ ದರ ಏರಿಕೆ ಕುರಿತು ಆರ್.ಅಶೋಕ್ ಅವರು ಮಾತನಾಡಿದ್ದಕ್ಕೆ ‘ಅಶೋಕ್ ಒಬ್ಬ ಪೆದ್ದ’ ಎಂದಿದ್ದಾರೆ. ಆದರೆ, ಜನರು ನಿಮ್ಮನ್ನು ‘ಸಿದ್ದಣ್ಣ ನುಂಗಣ್ಣ’ ಎಂದಿದ್ದರು. ಯಾಕೆಂದರೆ ದಲಿತರಿಗಾಗಿ ಮೀಸಲಿಟ್ಟ 25,500 ಕೋಟಿ ಹಣವನ್ನು ನೀವು ನುಂಗಿದ್ದೀರಿ. ಚುನಾವಣೆಗೆ ವೆಚ್ಚ ಮಾಡಲು ಸರಕಾರದ ಖಜಾನೆ ಹಣವನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಕೊಟ್ಟಿದ್ದುದನ್ನು ನೀವು ಬೇರೆ ಬೇರೆ ಖಾತೆ ಮಾಡಿ ಹೈದರಾಬಾದ್‍ಗೆ ಚುನಾವಣೆಗೆ ಕಳುಹಿಸಿ ಬಿಟ್ಟಿರಿ ಎಂದು ಆಕ್ಷೇಪಿಸಿದರು.

    ಇದು ಸಂವಿಧಾನದ ಉಲ್ಲಂಘನೆ. ಸಂವಿಧಾನವನ್ನು ಕಾಪಾಡುವವರಂತೆ ಮಾತಾಡುವ ನೀವು ಇಲ್ಲಿ ಅದನ್ನು ಉಲ್ಲಂಘಿಸಿಲ್ಲವೇ ಎಂದು ಕೇಳಿದರು. ಈ ರೀತಿ ತಪ್ಪು ಮಾಡಿದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಒಂದು ದಿನವೂ ಮುಂದುವರಿಯಲು ಯೋಗ್ಯವಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

   ಗ್ಯಾರಂಟಿಗಳಲ್ಲೂ ನೀವು ನುಡಿದಂತೆ ನಡೆದಿಲ್ಲ. ನಾವು ಒಂದು ರೂ. ಪೆಟ್ರೋಲ್ ದರ ಏರಿಸಿದ್ದಕ್ಕೆ ಸ್ಕೂಟರನ್ನು ಶವ ಮಾಡಿ ಹೆಗಲ ಮೇಲೆ ಹೊತ್ತು ಶವಯಾತ್ರೆ ಮಾಡಿದ್ದೀರಿ. ಈಗ ನೀವು ಪೆಟ್ರೋಲ್, ಡೀಸೆಲ್ ದರ ತೀವ್ರವಾಗಿ ಏರಿಸಿಲ್ಲವೇ? ಈಗ ಜನರು ಯಾವ ಶವಯಾತ್ರೆ ಮಾಡಬೇಕು? ನಾನು ಅಧಿಕಾರದಲ್ಲಿದ್ದರೆ 10 ರೂ. ಕಡಿಮೆ ಮಾಡುತ್ತಿದ್ದೆ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಅದಾದ ಬಳಿಕ ಬಸವರಾಜ ಬೊಮ್ಮಾಯಿಯವರು 7 ರೂ. ಕಡಿಮೆ ಮಾಡಿದ್ದರು. ಅದು ಒಳ್ಳೆಯ ಕೆಲಸ ಎಂದು ನೀವು ಹೇಳಲಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

   ರಾಜ್ಯದ ಕಾಂಗ್ರೆಸ್ ಸರಕಾರವು ಅಭಿವೃದ್ಧಿ ಕಾರ್ಯಗಳಿಗೆ ಯಾವಾಗ ಕಾಯಕಲ್ಪ ನೀಡಲಿದೆ ಎಂಬುದಾಗಿ ನಾವು ಕಾದು ಕುಳಿತಿದ್ದೇವೆ. ರಾಜ್ಯದ ಕಾಂಗ್ರೆಸ್ ಸರಕಾರವು ಕಳೆದೊಂದು ವರ್ಷದಲ್ಲಿ ನಡೆದುಬಂದ ಕುರಿತು ಮಾಹಿತಿ ನೀಡಿದರು. ರಾಜ್ಯದ ಕಾಂಗ್ರೆಸ್ ಸರಕಾರವು ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಟೇಪ್, ಕತ್ತರಿಯನ್ನು ಅಧಿಕಾರಕ್ಕೆ ಬಂದ ದಿನವೇ ಕೈಯಲ್ಲಿ ಹಿಡಿದುಕೊಂಡರೂ ಅದಕ್ಕಿನ್ನೂ ಕೆಲಸ ಸಿಕ್ಕಿಲ್ಲ ಎಂದು ಆಕ್ಷೇಪಿಸಿದರು. ಅವುಗಳಿಗೆ ಕಾಯಕಲ್ಪಕ್ಕಾಗಿ ನಾವೂ ಕಾದು ನೋಡುತ್ತಿದ್ದೇವೆ.

    ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡಿ, ಕೇವಲ ತಮ್ಮ ಮತಬ್ಯಾಂಕಿಗಾಗಿ ನಿರಂತರ ಪ್ರಯತ್ನ ಮಾಡಿದ್ದರು. ಏನಾದರೂ ಸುಳ್ಳು, ಎಷ್ಟಾದರೂ ಸುಳ್ಳು ಹೇಳಿ ಅಧಿಕಾರ ಹಿಡಿಯುವ ಉದ್ದೇಶ ಅವರದಾಗಿತ್ತು. ಅದರಲ್ಲೂ ಸಫಲರೂ ಆದರು. ಅದಕ್ಕಾಗಿಯೇ ಗ್ಯಾರಂಟಿಗಳನ್ನು ಪ್ರಕಟಿಸಿದ್ದರು ಎಂದು ಟೀಕಿಸಿದರು.

   ನುಡಿದಂತೆ ನಡೆದಿದ್ದೇವೆ ಎಂದು ಮಾತು ಮಾತಿಗೂ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನುಡಿಗೂ ನಡೆಗೂ ಸಂಬಂಧವೇ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರದು ಡಬಲ್ ಸ್ಟಾಂಡರ್ಡ್ ಅಲ್ಲ. ಅವರದು ತ್ರ್ರಿಬಲ್ ಸ್ಟಾಂಡರ್ಡ್. ನುಡಿಯುವುದು ಒಂದು ನಡೆಯುವುದು ಇನ್ನೊಂದು, ಮಾಡುವುದು ಮತ್ತೊಂದು. ಒಂದಕ್ಕೆ ಒಂದು ಸಂಬಂಧವೇ ಇಲ್ಲ ಎಂದು ಟೀಕಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap