ನವದೆಹಲಿ:
ನವದೆಹಲಿ, ಮಾರ್ಚ್ 30 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಕೂಲಿಯನ್ನು ಹೆಚ್ಚಳ ಮಾಡಲಾಗಿದೆ.ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಕೂಲಿ ಹೆಚ್ಚಳವಾಗಲಿದ್ದು, ಈ ಕುರಿತು ಆದೇಶ ಪ್ರಕಟವಾಗಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರುವಂತೆ ನರೇಗಾ ಯೋಜನೆ ಕೂಲಿಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ ಇದುವರೆಗೂ 289 ರೂ. ಕೂಲಿ ಪಡೆಯುತ್ತಿದ್ದವರು ಏಪ್ರಿಲ್ 1ರಿಂದ 309 ರೂ. ಪಡೆಯಲಿದ್ದಾರೆ.
ಪರಿಷ್ಕೃತ ಆದೇಶದ ಪ್ರಕಾರ 2022-23ರ ಹಣಕಾಸು ವರ್ಷದಿಂದ 21 ರಾಜ್ಯಗಳಲ್ಲಿ ನರೇಗಾ ಯೋಜನೆ ಕೂಲಿ 4 ರಿಂದ 21 ರೂ. ತನಕ ಏರಿಕೆಯಾಗಿದೆ. ಆದರೆ ಮಿಜೋರಾಂ, ಮಣಿಪು ಮತ್ತು ತ್ರಿಪುರ ರಾಜ್ಯಗಳಲ್ಲಿ ಯೋಜನೆಯ ಕೂಲಿ ಏರಿಕೆಯಾಗಿಲ್ಲ.
ಗೋವಾ ರಾಜ್ಯದಲ್ಲಿ ಶೇ 7.14ರಷ್ಟು ಏರಿಕೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ದಿನಕ್ಕೆ 294 ರೂ. ಪಡೆಯುತ್ತಿದ್ದವರು ಏಪ್ರಿಲ್ 1ರಿಂದ 315 ರೂ. ಪಡೆಯಲಿದ್ದಾರೆ. ಅತಿ ಕಡಿಮೆ ಎಂದರೆ ಮೇಘಾಲಯ ರಾಜ್ಯದಲ್ಲಿ ಶೇ 1.77ರಷ್ಟು ಏರಿಕೆಯಾಗಿದೆ. 226 ರೂ. ಪಡೆಯುತ್ತಿದ್ದವರು ಇನ್ನು ಮುಂದೆ ದಿನಕ್ಕೆ 230 ರೂ. ಪಡೆಯಲಿದ್ದಾರೆ.
ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಶೇ 2. ಅಸ್ಸಾಂ, ತಮಿಳುನಾಡು, ಪುದುಚೇರಿಯಲ್ಲಿ ಶೇ 2 ರಿಂದ 3ರಷ್ಟು ಕೂಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರ, ಒಡಿಶಾ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯುನಲ್ಲಿ ಶೇ 3 ರಿಂದ 4ರಷ್ಟು ಕೂಲಿ ಏರಿಕೆಯಾಗಿದೆ.
ಗುಜರಾತ್, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಶ್ಚಿಮ ಬಂಗಾಳ, ಸಿಕ್ಕಿಂ, ಹಿಮಾಚಲ ಪ್ರದೇಶ, ಅಂಡಮಾನ್ & ನಿಕೋಬಾರ್, ಪಂಜಾಬ್, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಕೂಲಿ ಶೇ 4-5ರಷ್ಟು ಹೆಚ್ಚಳವಾಗಿದೆ.
ಹರ್ಯಾಣ, ಛತ್ತೀಸ್‌ಗಢ, ಮದ್ಯ ಪ್ರದೇಶ, ಬಿಹಾರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಕೇರಳ, ಕರ್ನಾಟಕದಲ್ಲಿ ಶೇ 5ರಷ್ಟು ಕೂಲಿ ಏರಿಕೆಯಾಗಿದೆ. ನರೇಗಾ ಯೋಜನೆಯ ಸೆಕ್ಷನ್ 6 ಸಬ್ ಸೆಕ್ಷನ್ (1)ರ ಅನ್ವಯ ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ಪ್ರತಿ ದಿನ ಕೆಲಸ ಮಾಡುವ ಕಾರ್ಮಿಕರ ವೇತನ ನಿಗದಿ ಮಾಡುತ್ತದೆ.
ಗ್ರಾಮೀಣ ಮಟ್ಟದಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಗ್ರಾಹಕ, ಕೃಷಿ ಕಾರ್ಮಿಕರ ವೇತನ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನರೇಗಾ ಯೋಜನೆಯಡಿ ಕೂಲಿ ಪರಿಷ್ಕರಣೆ ಮಾಡಲಾಗುತ್ತದೆ.
ಹೊಸ ಕೂಲಿಯ ದರಪಟ್ಟಿ ಸರ್ಕಾರದ ಪರಿಷ್ಕೃತ ಆದೇಶದಂತೆ ಏಪ್ರಿಲ್ 1 ರಿಂದ ಹರ್ಯಾಣದಲ್ಲಿ 331 ರೂ. ಗೋವಾ 315 ರೂ., ಕರ್ನಾಟಕ 309, ಅಂಡಮಾನ್ & ನಿಕೋಬಾರ್‌ನಲ್ಲಿ 308 ರೂ. ಕೂಲಿ ಸಿಗಲಿದೆ.
ತ್ರಿಪುರ 212 ರೂ., ಬಿಹಾರ 210 ರೂ., ಜಾರ್ಖಂಡ್ 210 ರೂ., ಛತ್ತೀಸ್‌ಗಢ್ 204 ರೂ. ಮತ್ತು ಮಧ್ಯ ಪ್ರದೇಶ 204 ರೂ. ಕಡಿಮೆ ಕೂಲಿ ಹೊಂದಿರುವ ರಾಜ್ಯಗಳು.
ಉತ್ತರ ಪದೇಶ ಮತ್ತು ಉತ್ತರಾಖಂಡ್‌ನಲ್ಲಿ ಪ್ರತಿದಿನದ ಕೂಲಿ 213 ರೂ. ಆಗಿದೆ. ಅರುಣಾಚಲ ಪ್ರದೇಶ 257 ರೂ., ಸಿಕ್ಕಿಂ, ಒಡಿಶಾದಲ್ಲಿ 222 ರೂ. ಮತ್ತು ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 227 ರೂ. ದಿನದ ಕೂಲಿ ಸಿಗಲಿದೆ.
ಯೋಜನೆ ಕುರಿತು ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ದಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ