
ದೆಹಲಿಯಲ್ಲಿ ಇಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಜಿಎಸ್ ಟಿ ಅನುಷ್ಠಾನ ಕುರಿತಂತೆ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ತೆರಿಗೆ ಸಂಗ್ರಹಣೆ ಕುರಿತು ಅಂಕಿ-ಅಂಶಗಳ ಸಹಿತ ಮನವರಿಕೆ ಮಾಡಿಕೊಟ್ಟರು.ಜಿಎಸ್ ಟಿ ಜಾರಿಗೊಳ್ಳುವ ಮುನ್ನ ರಾಜ್ಯದ ತೆರಿಗೆ ಸಂಗ್ರಹವು ವಾರ್ಷಿಕವಾಗಿ ಏರುಗತಿಯಲ್ಲಿತ್ತು. ಮೌಲ್ಯ ವರ್ಧಿತ ತೆರಿಗೆ ವ್ಯವಸ್ಥೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ತೆರಿಗೆ ಸಂಗ್ರಹದಲ್ಲಿ ಸರಾಸರಿ ಶೇ. 10-12 ರಷ್ಟು ವಾರ್ಷಿಕ ವೃದ್ಧಿ ದರವನ್ನು ಹೊಂದಿತ್ತು. ಆದರೆ ರಾಜ್ಯದಲ್ಲಿ ಜಿಎಸ್ ಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ಬಳಿಕ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ರಾಜ್ಯವು ನಿರೀಕ್ಷಿಸಿದ್ದ ತೆರಿಗೆ ಸಂಗ್ರಹಕ್ಕಿಂತಲೂ ಶೇ. 20 ರಷ್ಟು ಕೊರತೆ ಕಂಡುಬಂದಿದೆ. ಹೀಗಾಗಿ,ವಿವಿಧ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತದೆ ಎನ್ನುವ ಅಂಶವನ್ನು ಮುಖ್ಯಮಂತ್ರಿಗಳು ವಿತ್ತ ಸಚಿವರಿಗೆ ವಿವರಿಸಿದರು.
ರಾಜ್ಯದಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಎಲ್ಲ ಪ್ರಯತ್ನಗಳ ಹೊರತಾಗಿಯೂ ಪ್ರಸಕ್ತ ತೆರಿಗೆ ದರಗಳು, ಸೇವಾ ವಲಯದಲ್ಲಿ ನಿರೀಕ್ಷೆಗಿಂತ ಕಡಿಮೆ ತೆರಿಗೆ ಸಂಗ್ರಹವಾಗುತ್ತಿದೆ. 2017-18ಕ್ಕೆ ಹೋಲಿಸಿದರೆ 2018-19ರಲ್ಲಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಆದರೆ ಈ ಏರಿಕೆಯು ರಾಜ್ಯ ಸರ್ಕಾರವು ನಿರೀಕ್ಷಿಸಿದ್ದ ಪ್ರಮಾಣಕ್ಕಿಂತಲೂ ಕಡಿಮೆ ಇದೆ. ಈ ಚಿತ್ರಣವು 2022ರ ನಂತರವೂ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ, ಜಿಎಸ್ ಟಿ ಅನುಷ್ಠಾನಕ್ಕಾಗಿ ಕೇಂದ್ರವು ನೀಡುವ ಪರಿಹಾರ ನೆರವನ್ನು 2022ರ ಬಳಿಕವೂ 2025ರ ವರೆಗೆ ಮುಂದುವರಿಸುವುದು ರಾಜ್ಯ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚಿನ ಪ್ರಯೋಜನ ತಂದುಕೊಂಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
