ನವದೆಹಲಿ:
ಕೆಲ ವರ್ಷಗಳಿಂದ ಭಾರಿ ಸುದ್ದಿಯಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವದ ಸುಮಾರು 752 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಕಾಂಗ್ರೆಸ್ ಪಕ್ಷದ ಪ್ರವರ್ತಿತ ಯಂಗ್ ಇಂಡಿಯನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ 751.9 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ತಿಳಿಸಿದೆ. ಪತ್ರಿಕೆಯ ಪ್ರಕಾಶಕ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಮತ್ತು ಅದರ ಹಿಡುವಳಿ ಕಂಪನಿ ಯಂಗ್ ಇಂಡಿಯನ್ ಸಂಸ್ಥೆ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಭಾರತದ ದೆಹಲಿ, ಮಹಾರಾಷ್ಟ್ರದ ಮುಂಬೈ ಮತ್ತು ಉತ್ತರ ಪ್ರದೇಶದ ಲಖನೌ ನಂತಹ ಅನೇಕ ನಗರಗಳಲ್ಲಿ ಸುಮಾರು 661.69 ಕೋಟಿ ರೂಪಾಯಿಗಳಷ್ಟು ಸ್ಥಿರಾಸ್ತಿಗಳ ರೂಪದಲ್ಲಿ ಅಪರಾಧದ ಆದಾಯವನ್ನು ಹೊಂದಿದೆ ಮತ್ತು ಯಂಗ್ ಇಂಡಿಯನ್ ಸಂಸ್ಥೆ ಕೂಡ ಅಪರಾಧದ ಆದಾಯವನ್ನು ಹೊಂದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಎಜೆಎಲ್‌ನ ಈಕ್ವಿಟಿ ಷೇರುಗಳಲ್ಲಿ ಹೂಡಿಕೆಯ ರೂಪದಲ್ಲಿ 90.21 ಕೋಟಿ ರೂ. ಹೊಂದಿದೆ ಎಂದು ಇಡಿ ಆರೋಪಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ