ನವದೆಹಲಿ
ದೇಶದಲ್ಲಿ ಕೊರೋನಾ ತಡೆಗಾಗಿ ವಿಧಿಸಿರುವ ಲಾಕ್ ಡೌನ್ ಪರಿಣಾಮವಾಗಿ ಸರಿ ಸುಮಾರು 280 ಕೋಟಿ ರೂಪಾಯಿಗಳಷ್ಟು ಪಿಎಫ್ ಹಣ ವಿತ್ ಡ್ರಾ ಮಾಡಲಾಗಿದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪಿಎಫ್ ಚಂದಾದಾರರಿಗೆ ಸಹಾಯವಾಗುವಂತೆ ಮಾಡಲು ಇಪಿಎಫ್ ಯೋಜನೆಗೆ ತಿದ್ದುಪಡಿ ತರಲಾಗಿದ್ದು ದೇಶಾದ್ಯಂತ ಪಿಎಫ್ ವಿತ್ ಡ್ರಾ ಮಾಡುವುದಕ್ಕೆ 1.37 ಲಕ್ಷ ಅರ್ಜಿಗಳು ಬಂದಿದ್ದವು. ಒಟ್ಟಾರೆ 280 ಕೋಟಿ ರೂಪಾಯಿ ಮೊತ್ತದ ಪಿಎಫ್ ಹಣ ವಿತ್ ಡ್ರಾ ಮಾಡಲಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ. ವಿತ್ ಡ್ರಾ ಮಾಡಲಾಗಿರುವ ಹಣವನ್ನು ಈಗಾಗಲೇ ಜಮೆ ಮಾಡುವ ಕೆಲಸ ಪ್ರಾರಂಭವಾಗಿದೆ, ಬೇರೆ ವಿಭಾಗಗಳಲ್ಲಿ ಹಣ ಹಿಂತೆಗೆತಕ್ಕೆ ಅರ್ಜಿ ನೀಡಿರುವವರೂ ಸಹ ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಹಣ ಹಿಂತೆಗೆಯಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇಪಿಎಫ್ ಯೋಜನೆಯಿಂದ ಹಣ ಹಿಂತೆಗೆದುಕೊಳ್ಳುವುದಕ್ಕೆ ವಿಶೇಷ ಅವಕಾಶ ಕಲ್ಪಿಸಿರುವುದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಭಾಗವಾಗಿದೆ.
ಮೂರು ತಿಂಗಳ ಬೇಸಿಕ್ ವೇತನ ಹಾಗೂ ತುಟ್ಟಿ ಭತ್ಯಗಳ ವ್ಯಾಪ್ತಿಯಲ್ಲಿ ಬರುವ ನಾನ್ ರಿಫಂಡಬಲ್ ವಿತ್ ಡ್ರಾಯಲ್ ಅಥವಾ ಇಪಿಎಫ್ ಖಾತೆಯಲ್ಲಿ ಸದಸ್ಯರ ಕ್ರೆಡಿಟ್ ನಲ್ಲಿ ಲಭ್ಯವಿರುವ ಶೇ.75 ರಷ್ಟು ಮೊತ್ತ ಈ ಎರಡರಲ್ಲಿ ಯಾವುದು ಕಡಿಮೆಯಿದೆಯೋ ಅದನ್ನು ನೀಡಲಾಗುವುದು, ಇದಕ್ಕಿಂತಲೂ ಕಡಿಮೆ ಮೊತ್ತವನ್ನೂ ಸದಸ್ಯರು ಹಿಂತೆಗೆದುಕೊಳ್ಳಬಹುದು, ಇದು ಮುಂಗಡ ಹಣವಾದ್ದರಿಂದ ಇದಕ್ಕೆ ಆದಾಯ ತೆರಿಗೆ ಕಡಿತಗಳು ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.