ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ನಿಧನ..!

ನವದೆಹಲಿ:

    ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರು ಭಾನುವಾರ ಬೆಳಿಗ್ಗೆ ವಿಧಿವಶರಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ. 

    ಜಸ್ವಂತ್ ಸಿಂಗ್ ಅವರಿಗೆ 82 ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಜೂನ್.25 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಲ್ಟಿಆರ್ಗನ್ ಡಿಸ್ಫಂಕ್ಷನ್ ಸಿಂಡ್ರೋಮ್’ನಿಂದ ಜಸ್ವಂತ್ ಅವರು ಬಳಲುತ್ತಿದ್ದರು. ಇದರಂತೆ ಇಂದು ಬೆಳಿಗ್ಗೆ ಹೃದಯಸ್ತಂಭನ ಎದುರಾಗಿ ಬೆಳಿಗ್ಗೆ 6.55ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಜಸ್ವಂತ್ ಅವರಿಗೆ ಕೊರೋನಾ ಸೋಂಕು ತಗುಲಿರಲಿಲ್ಲ ಎಂದು ದೆಹಲಿಯ ಸೇನಾ ಆಸ್ಪತ್ರೆ ಮಾಹಿತಿ ನೀಡಿದೆ. 

   ಜಸ್ವಂತ್ ಸಿಂಗ್ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು ಸಂತಾಪ ಸೂಚಿಸಿದ್ದಾರೆ. ಜಸ್ವಂತ್ ಅವರು ದೇಶಕ್ಕಾಗಿ ಮೊದಲು ಸೈನಿಕರಾಗಿ ಸೇವೆ ಸಲ್ಲಿಸಿದ್ದು, ನಂತರ ರಾಜಕೀಯದೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಈ ನಿಧನದ ವಾರ್ತೆ ಕೇಳಿ ದುಃಖವಾಯಿತು ಎಂದು ಹೇಳಿದ್ದಾರೆ. 

   ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಜಸ್ವಂತ್ ಸಿಂಗ್ ಜಿ ಅವರು ತಮ್ಮ ವಿಶಿಷ್ಟ ಛಾಪಿನ ಮೂಲಕವೇ ಗುರುತಿಸಲ್ಪಡಲಿದ್ದಾರೆ. ಅವರು ಬಿಜೆಪಿಯನ್ನು ಸಂಘಟನಾತ್ಮಕವಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ನಮ್ಮ ನಡುವಿನ ಮಾತುಕತೆ ಯಾವತ್ತೂ ನನ್ನ ನೆನಪಿನಲ್ಲಿರುತ್ತದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ಅವರು ತಮ್ಮ ಆರೋಗ್ಯ ಸಮಸ್ಯೆ ವಿರುದ್ಧ ಸಾಕಷ್ಟು ಹೋರಾಡಿದ್ದಾರೆ.ಅವರ ಕುಟುಂಬ ಮತ್ತು ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮ ಕೊಡಲಿ. ಮಾನವೇಂದ್ರ ಸಿಂಗ್ ಅವರೊಂದಿಗೆ ಮಾತನಾಡಿ ಸಂತಾಪ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ, ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಶ್ರೀ ಜಸ್ವಂತ್ ಸಿಂಗ್ ಜಿ ಅವರ ನಿಧನದಿಂದ ತೀವ್ರ ನೋವಾಗಿದೆ. ರಕ್ಷಣಾ ಮಂತ್ರಿ ಉಸ್ತುವಾರಿ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಅವರು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದರು. ಜಸ್ವಂತ್ ಅವರು ಪರಿಣಾಮಕಾರಿ ಸಚಿವರು ಮತ್ತು ಸಂಸದರು ಎಂದು ಗುರ್ತಿಸಿಕೊಂಡ ನಾಯಕರಾಗಿದ್ದರು ಎಂದಿದ್ದಾರೆ. 

    ರಾಜಸ್ಥಾನದ ಜೋಧ್ ಪುರ ಮೂಲದವರಾದ ಜಸ್ವಂತ್ ಸಿಂಗ್ ಅವರು, ಆರಂಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಜಕೀಯ ಆಕಾಂಕ್ಷೆಯಿಂದ ಸೇನೆಗೆ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕೀಯಕ್ಕೆ ಸೇರ್ಪಡೆಯಾಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap