ಮುಂಬೈ:
ರಿಪಬ್ಲಿಕ್ ಟಿವಿ ಸಂಪಾದಕ ಹಾಗು ವಿವಾದಾತ್ಮಕ ಪತ್ರಕರ್ತ ಎಂದೇ ಖ್ಯಾತರಾದ ಅರ್ನಬ್ ಗೋಸ್ವಾಮಿ ಅವರ ಕುರಿತಂತೆ ಚಲನಚಿತ್ರವೊಂದನ್ನು ಮಾಡುತ್ತೇನೆ ಎಂದು ಬಾಲಿವುಡ್ ನ ವಿವಾಗಳ ಕೇಂದ್ರ ಬಿಂದು ಎಂದೇ ಖ್ಯಾತರಾದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ತಮ್ಮ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುರಿತಂತೆ ಅರ್ನಬ್ ಅವರ ರಿಪಬ್ಲಿಕ್ ಸುದ್ದಿವಾಹಿನಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಕುರಿತು ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಬಾಲಿವುಡ್ ಕುರಿತಂತೆ ಅರ್ನಬ್ ಗೋಸ್ವಾಮಿ ತುಂಬಾ ಕೀಳುಮಟ್ಟದ ಮಾತುಗಳಲ್ಲಿ ವ್ಯಾಖ್ಯಾನ ಮಾಡಿದ್ದಾರೆ ಆದ್ದರಿಂದ ನಾನು ಅವರನ್ನೇ ಪ್ರೇರಣೆಯನ್ನಾಗಿಸಿಕೊಂಡು ಚಿತ್ರವೊಂದನ್ನು ಮಾಡುವವನಿದ್ದೇನೆ ಎಂದಿದ್ದಾರೆ.
ಒಂದು ಚಿತ್ರರಂಗವನ್ನು ಅತ್ಯಂತ ಕೊಳಕಿನ ಉದ್ಯಮ ಎಂದು ಕರೆಯುವ ಮೂಲಕ ಅವರು ಇಡೀ ಚಿತ್ರರಂಗಕ್ಕೆ ಅವಮಾನ ಮಾಡಿದ್ದಾರೆ. ಬಾಲಿವುಡ್ ಭೂಗತಲೋಕ ಹಾಗು ಅಪರಾಧ ಜಗತ್ತಿಗೆ ಅತ್ಯಂತ ನಿಕಟ ಸಂಪರ್ಕಗಳನ್ನು ಹೊಂದಿರುವ ಉದ್ಯಮ, ಇದು ಅತ್ಯಾಚಾರಿಗಳು, ದರೋಡೆಕೋರರು, ಲೈಂಗಿಕ ಶೋಷಕರಿಂದ ತುಂಬಿದೆ ಎಂದೆಲ್ಲಾ ಅವಾಚ್ಯ ಶಬ್ದಗಳಿಂದ ಇಡೀ ಬಾಲಿವುಡ್ ಅನ್ನು ಟೀಕಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವನ್ನು ಅರ್ನಬ್ ಟಿಆರ್ ಪಿ ಗಳಿಸುವ ಒಂದು ಸಾಧನವನ್ನಾಗಿ ಬಳಸಿಕೊಂಡಿದ್ದಾರೆ , ಅರ್ನಬ್ ಸುಳ್ಳುಸುದ್ದಿಗಳಿಗೆ ಹೆದರಿ ಬಾಲಿವುಡ್ ನ ಖ್ಯಾತನಾಮರಾದ ಆದಿತ್ಯಾ ಚೋಪ್ರಾ, ಶಾರುಖ್ ಖಾನ್, ಸಲ್ಮಾನ್ ಖಾನ್, ಸೇರಿದಂತೆ ಹಲವರು ಮೌನವಹಿಸಿದ್ದಾರೆ. ಮಾಧ್ಯಮಗಳೂ ಇಡೀ ಉದ್ಯಮವನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದು, ಸಿನಿಮಾ ಉದ್ಯಮದಲ್ಲಿರುವವರನ್ನು ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಎಂಬಂತೆ ಬಿಂಬಿಸುತ್ತಿವೆ ಎಂದು ರಾಮ್ ಗೋಪಾಲ್ ವರ್ಮಾ ಕಿಡಿಕಾರಿದ್ದಾರೆ.
ಅಲ್ಲದೆ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ ತಾವು ಸಿನಿಮಾ ಮಾಡುವುದಾಗಿ ಆರ್ ಜಿವಿ ಘೋಷಣೆ ಮಾಡಿದ್ದು, ಆ ಚಿತ್ರಕ್ಕೆ ಅರ್ನಬ್ ಎಂಗು ಹೆಸರಿಟ್ಟು, ‘ದಿ ನ್ಯೂಸ್ ಪ್ರಾಸ್ಟಿಟ್ಯೂಟ್’ ಅಡಿ ಬರಹ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಅರ್ನಬ್ ಗೋಸ್ವಾಮಿ ಬೇಕಿದ್ದರೆ ನನ್ನ ಚಿತ್ರವನ್ನು ತಡೆಯಲು ಪ್ರಯತ್ನಿಸಲಿ. ಅದನ್ನೂ ಕೂಡ ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳುತ್ತೇನೆ ಎಂದು ಆರ್ ಜಿವಿ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ